ಕನ್ನಡಪ್ರಭ ವಾರ್ತೆ, ತುಮಕೂರುಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭವ್ಯವಾಗಿ ಸಜ್ಜುಗೊಂಡಿದ್ದ ಹಾಸ್ಯ ಚಕ್ರವರ್ತಿ ಶ್ರೀ ಟಿ.ಆರ್. ನರಸಿಂಹರಾಜು ಸಾಂಸ್ಕೃತಿಕ ದಸರಾ ವೇದಿಕೆಯಲ್ಲಿಂದು ನಗಾರಿ ಬಾರಿಸುವ ಮೂಲಕ ಸಾಂಸ್ಕೃತಿಕ ದಸರಾ ವೈಭವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈಗಾಗಲೇ ತುಮಕೂರು ದಸರಾ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ಪೂಜ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಭಕ್ತಿ-ಭಾವದಿಂದ ಆರಂಭಗೊಂಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈಗ ಚಾಲನೆ ನೀಡಲಾಗಿದೆ. ಸಾಂಸ್ಕೃತಿಕ ದಸರಾ ವೈಭವದಲ್ಲಿ ಜಿಲ್ಲೆಯ 2500 ಸ್ಥಳೀಯ ಕಲಾವಿದರು ತಮ್ಮ ಕಲಾಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ. ಭರತನಾಟ್ಯ, ಸಂಗೀತ, ಬಯಲಾಟ, ಜನಪದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಪೌರಾಣಿಕ ರಂಗಗೀತೆಗಳು ಮತ್ತು ಇತರೆ ವೈವಿಧ್ಯಮಯ ಕಲಾ ಪ್ರಕಾರಗಳ ಮೂಲಕ ದಸರಾ ಉತ್ಸವಕ್ಕೆ ಇನ್ನಷ್ಟು ಮೆರಗನ್ನು ತರಲಿದ್ದಾರೆ. ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳು ತುಂಬಾ ಕಡಿಮೆ. ಈ ನಿಟ್ಟಿನಲ್ಲಿ ತುಮಕೂರು ದಸರಾ ವೇದಿಕೆ ಅವರಿಗೆ ದೊಡ್ಡ ವೇದಿಕೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಡಾ. ಬಿ. ಪ್ರಭುದೇವ್, ಚಂದ್ರಶೇಖರ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ. ಪ್ರಭು, ಎಸ್ಪಿ ಕೆ.ವಿ. ಅಶೋಕ್, ನಗರ ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ., ಕಲಾವಿದರಾದ ಡಾ: ಲಕ್ಷ್ಮಣ್ ದಾಸ್, ಮಲ್ಲಿಕಾರ್ಜುನ ಕೆಂಕೆರೆ, ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
-------ಬಾಕ್ಸ್..
ದಸರಾಃ ಬುಧವಾರದ ಸಾಂಸ್ಕೃತಿಕ ಕಾರ್ಯಕ್ರಮಗಳುತುಮಕೂರು: ದಸರಾ ಉತ್ಸವದ ಪ್ರಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಸ್ಯ ಚಕ್ರವರ್ತಿ ಶ್ರೀ ಟಿ.ಆರ್. ನರಸಿಂಹರಾಜು ಸಾಂಸ್ಕೃತಿಕ ದಸರಾ ವೇದಿಕೆಯಲ್ಲಿ ಸೆಪ್ಟೆಂಬರ್ 24 ರ ಸಂಜೆ 4 ಗಂಟೆಯಿಂದ ತುಮಕೂರಿನ ಸಿದ್ಧಲಿಂಗಯ್ಯ, ಹಿರೇಮಠ ಮತ್ತು ತಂಡದ ವತಿಯಿಂದ ಹಿಂದೂಸ್ಥಾನಿ ಸಂಗೀತ(ವಚನ/ಭಕ್ತಿ ಸಂಗೀತ), ಬಿ.ಎಸ್. ಮಲ್ಲಿಕಾರ್ಜುನ ಮತ್ತು ತಂಡದಿಂದ ಸುಗಮ ಸಂಗೀತ, ಗುಬ್ಬಿ ತಾಲ್ಲೂಕು ನಿಟ್ಟೂರಿನ ಶ್ರೀ ಎನ್.ಕೆ. ಮೋಹನ್ ಕುಮಾರ್ ಮತ್ತು ತಂಡದಿಂದ ಕಥಾಕೀರ್ತನ(ಕಟೀಲು ದುರ್ಗಾ ವೈಭವ), ಕುಣಿಗಲ್ ಪಟ್ಟಣದ ಸ್ಟೆಲ್ಲಾ ಮೇರಿಸ್ ಅನುದಾನರಹಿತ ಪ್ರೌಢಶಾಲೆಯಿಂದ ಜಾನಪದ ನೃತ್ಯ, ತುಮಕೂರಿನ ಅನನ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಸಮೂಹ ನೃತ್ಯ, ತುಮಕೂರು ವಿಶ್ವವಿದ್ಯಾನಿಲಯ ಜ್ಞಾನಸಿರಿ ಕ್ಯಾಂಪಸ್ ವತಿಯಿಂದ ನೃತ್ಯರೂಪಕ(ಮೂಡಲ್ ಕುಣಿಗಲ್ ಕೆರೆ), ಗುಬ್ಬಿಯ ಶ್ರೀ ರೇವತಿ ನೃತ್ಯ ಕಲಾ ಮಂದಿರದ ವತಿಯಿಂದ ನೃತ್ಯರೂಪಕ(ತ್ರಿದೇವಿ ರೂಪ ಮತ್ತು ತುಳಜಾ ಭವಾನಿ ಅಮ್ಮನವರ ಕಥೆ), ತುಮಕೂರಿನ ಸಾಲು ಮರದ ತಿಮ್ಮಕ್ಕ ಸಮುದಾಯ ಸೇವಾ ಟ್ರಸ್ಟ್ ವತಿಯಿಂದ ಸಮೂಹ ಗಾಯನ(ಜಾನಪದ/ಭಾವಗೀತೆ), ಶ್ರೀ ತೇಜಸ್ವಿನಿ ಗಾನ ಕಲಾವೃಂದದ ವತಿಯಿಂದ ಜಾನಪದ ಗೀತ ಗಾಯನ, ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ದಸರಾ ಉತ್ಸವದ ಪ್ರಯುಕ್ತ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿನ ಮಾಸ್ಟರ್ ಹಿರಣ್ಣಯ್ಯ ರಂಗ ವೇದಿಕೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಶ್ರೀ ನಾಗಾರ್ಜುನ ಕಲಾಸಂಘದ ವತಿಯಿಂದ ಶ್ರೀ ಕೃಷ್ಣ ವಿಜಯ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.