ಅಂಗನವಾಡಿಯಲ್ಲಿ ಸ್ತ್ರೀಶಕ್ತಿ ಸಂಘಗಳೇ ಪೌಷ್ಟಿಕ ಆಹಾರ ತಯಾರಿಸಬೇಕು

KannadaprabhaNewsNetwork |  
Published : Sep 24, 2025, 01:00 AM IST
ಅಂಗನವಾಡಿ ಮಕ್ಕಳಿಗೆ ಸ್ಥಳೀಯ ಸ್ತ್ರೀಶಕ್ತಿ ಸಂಘಗಳೇ ಪೌಷ್ಟಿಕ ಆಹಾರ ತಯಾರಿಸಬೇಕು: ಶಾಸಕ ಕೆ.ಎಂ. ಶಿವಲಿಂಗೇಗೌಡ | Kannada Prabha

ಸಾರಾಂಶ

ಪ್ರಸ್ತುತ ಪೌಷ್ಟಿಕ ಆಹಾರ ಮದರಾಸಿನಲ್ಲಿ ತಯಾರಾಗುತ್ತಿದ್ದು, ಶಿವಮೊಗ್ಗ ಹಾಗೂ ಬೇಲೂರಿನಲ್ಲಿ ಪ್ಯಾಕ್ ಮಾಡಲಾಗುತ್ತಿದೆ. ಆದರೆ ಶುದ್ಧ ಆಹಾರ ಸ್ಥಳದಲ್ಲಿಯೇ ತಯಾರಾಗಿ ಮಕ್ಕಳಿಗೆ ತಲುಪಬೇಕು. ಈ ಜವಾಬ್ದಾರಿಯನ್ನು ಸ್ಥಳೀಯ ಸ್ತ್ರೀಶಕ್ತಿ ಸಂಘಗಳಿಗೆ ನೀಡಿದರೆ, ಅವರು ಅದನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಇದಕ್ಕಾಗಿ ನಾನು ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು. ಅಂಗನವಾಡಿ ಕೇಂದ್ರಗಳು ಸಣ್ಣ ಗ್ರಾಮಗಳಿಗೂ ಮಂಜೂರಾಗುತ್ತಿವೆ. ಅಲ್ಲಿ ಮಕ್ಕಳಿಗೂ ಪೌಷ್ಟಿಕ ಆಹಾರ ಹಾಗೂ ಶಿಕ್ಷಣ ದೊರಕುವಂತೆ ಮಾಡಲು ನಾನು ಪ್ರಯತ್ನಿಸಿದ್ದೇನೆ. ಮಕ್ಕಳ ಸದೃಢ ಆರೋಗ್ಯಕ್ಕಾಗಿ ಈ ಯೋಜನೆ ಅತ್ಯಂತ ಮುಖ್ಯವಾಗಿದೆ. ಮಹಿಳೆಯರು ಕೇವಲ ಅಡಿಗೆಮನೆಗೆ ಸೀಮಿತವಾಗದೆ, ಸಮಾಜಮುಖಿಯಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕಾರ್ಯದಕ್ಷತೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಬಿಸಿ ಬಿಸಿಯಾಗಿ ಸ್ಥಳೀಯ ಸ್ತ್ರೀಶಕ್ತಿ ಸಂಘಗಳೇ ತಯಾರಿಸಿ ನೀಡಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.

ನಗರದ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಸ್ತುತ ಪೌಷ್ಟಿಕ ಆಹಾರ ಮದರಾಸಿನಲ್ಲಿ ತಯಾರಾಗುತ್ತಿದ್ದು, ಶಿವಮೊಗ್ಗ ಹಾಗೂ ಬೇಲೂರಿನಲ್ಲಿ ಪ್ಯಾಕ್ ಮಾಡಲಾಗುತ್ತಿದೆ. ಆದರೆ ಶುದ್ಧ ಆಹಾರ ಸ್ಥಳದಲ್ಲಿಯೇ ತಯಾರಾಗಿ ಮಕ್ಕಳಿಗೆ ತಲುಪಬೇಕು. ಈ ಜವಾಬ್ದಾರಿಯನ್ನು ಸ್ಥಳೀಯ ಸ್ತ್ರೀಶಕ್ತಿ ಸಂಘಗಳಿಗೆ ನೀಡಿದರೆ, ಅವರು ಅದನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಇದಕ್ಕಾಗಿ ನಾನು ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು. ಅಂಗನವಾಡಿ ಕೇಂದ್ರಗಳು ಸಣ್ಣ ಗ್ರಾಮಗಳಿಗೂ ಮಂಜೂರಾಗುತ್ತಿವೆ. ಅಲ್ಲಿ ಮಕ್ಕಳಿಗೂ ಪೌಷ್ಟಿಕ ಆಹಾರ ಹಾಗೂ ಶಿಕ್ಷಣ ದೊರಕುವಂತೆ ಮಾಡಲು ನಾನು ಪ್ರಯತ್ನಿಸಿದ್ದೇನೆ. ಮಕ್ಕಳ ಸದೃಢ ಆರೋಗ್ಯಕ್ಕಾಗಿ ಈ ಯೋಜನೆ ಅತ್ಯಂತ ಮುಖ್ಯವಾಗಿದೆ. ಮಹಿಳೆಯರು ಕೇವಲ ಅಡಿಗೆಮನೆಗೆ ಸೀಮಿತವಾಗದೆ, ಸಮಾಜಮುಖಿಯಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕಾರ್ಯದಕ್ಷತೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು. 5 ಲಕ್ಷ ರು. ದೇಣಿಗೆ:ಸಭೆಯಲ್ಲಿಯೇ ಶಾಸಕ ಶಿವಲಿಂಗೇಗೌಡ ಅವರು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ 5 ಲಕ್ಷ ರು. ದೇಣಿಗೆಯನ್ನು ನೀಡಿದರು.

ಈ ಕುರಿತು ಮಾತನಾಡಿದ ಅವರು ನಿವೃತ್ತ ನೌಕರರ ಸಂಘವು ಸದಸ್ಯರು ನಿಧನರಾದರೆ ಶವಸಂಸ್ಕಾರ ನೆರವಾಗಿ ಎರಡು ಸಾವಿರ ನೀಡುತ್ತಿದೆ. ಇದು ಸಾಲದು ಎಂದು ನಾನು ಈ ಹಿಂದೆ ಸೂಚಿಸಿದ್ದೆ. ಈಗ ನೀಡಿದ ದೇಣಿಗೆಯ ಬಡ್ಡಿ ಶವಸಂಸ್ಕಾರ ನೆರವಿಗೆ ಬಳಸಬಹುದು. ಇಂತಹ ಸಂದರ್ಭದಲ್ಲಿ ನನ್ನನ್ನೂ ಕರೆಯಿರಿ, ನಾನು ಸಹ ಭಾಗಿಯಾಗುತ್ತೇನೆ ಎಂದರು.

ಪಂಚ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಧರ್ಮಶೇಖರ್ ಮಾತನಾಡಿ, ಶಾಸಕರು ಹಾಗೂ ಸರ್ಕಾರ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅರಸೀಕೆರೆಯಲ್ಲಿ ನೀರಿನ ಸಮಸ್ಯೆ ಇತ್ತು, ಶಾಸಕರು ಹೇಮಾವತಿ ನೀರು ತಂದು ಪರಿಹರಿಸಿದ್ದಾರೆ. ವಸತಿ ಶಾಲೆಗಳು, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಗೊಂಡಿವೆ. 1300 ಮನೆಗಳು ನಿರ್ಮಾಣಗೊಂಡು ವಿತರಿಸಲ್ಪಟ್ಟಿವೆ. 10,000 ಮನೆಗಳ ನಿರ್ಮಾಣಕ್ಕೂ ಶಾಸಕರು ಅಡಿಪಾಯವನ್ನು ಹಾಕಿದ್ದಾರೆ ಎಂದು ವಿವರಿಸಿದರು. ಒಮ್ಮೆ ಮಹಿಳೆಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಗಾರ್ಮೆಂಟ್ಸ್‌ಗೆ ತೆರಳುತ್ತಿದ್ದರು. ಶಾಸಕರ ಸಹಕಾರದಿಂದ ಅರಸೀಕೆರೆಯಲ್ಲಿಯೇ ಗಾರ್ಮೆಂಟ್ಸ್ ಆರಂಭವಾಗಿ ಸಾವಿರಾರು ಮಹಿಳೆಯರು ಉದ್ಯೋಗ ಪಡೆದು ಆರ್ಥಿಕವಾಗಿ ಬಲವಾಗುತ್ತಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಯೋಗೇಶ್ ಮಾತನಾಡಿ ಅರಸೀಕೆರೆ ತಾಲೂಕಿನಲ್ಲಿ 6 ತಿಂಗಳಿಂದ 6 ವರ್ಷದವರೆಗಿನ 10,318 ಮಕ್ಕಳು ಪೌಷ್ಟಿಕ ಆಹಾರ ಸೌಲಭ್ಯ ಪಡೆಯುತ್ತಿದ್ದಾರೆ. ಜೊತೆಗೆ 1,185 ಗರ್ಭಿಣಿಯರು, 1,175 ಬಾಣಂತಿಯರು ಹಾಗೂ 877 ಅಂಗನವಾಡಿ ಸಹಾಯಕರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. 79,844 ಮಹಿಳೆಯರು ಮಾಹೇಯಾನ ಯೋಜನೆಯಡಿ ಪ್ರತಿ ತಿಂಗಳು 2,000 ರು. ಪಡೆಯುತ್ತಿದ್ದಾರೆ. 2006ರಿಂದ 3,591 ಫಲಾನುಭವಿಗಳಿಗೆ ‘ಸುಕನ್ಯಾ ಸಮೃದ್ಧಿ ಯೋಜನೆ’ ಸೌಲಭ್ಯ ದೊರೆತಿದೆ ಎಂದು ವಿವರಿಸಿದರು.

ತಾಲೂಕು ಆರೋಗ್ಯಾಧಿಕಾರಿ ರಂಗನಾಥ್ ಕೂಡ ಮಕ್ಕಳ ಪೌಷ್ಠಿಕತೆಯ ಕುರಿತು ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಮೂರ್ತಿ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು, ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ