ಕನ್ನಡಪ್ರಭ ವಾರ್ತೆ ಬೆಳಗಾವಿ/ಕಾಗವಾಡ
ಲಾರಿಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಕೆಲ ಸಂಘಟನೆಗಳ ಕಾರ್ಯಕರ್ತರು ಐನಾಪುರದಲ್ಲಿ ಲಾರಿಯನ್ನು ತಡೆದು ಪರಿಶೀಲಿಸಿದಾಗ ಗೋಮಾಂಸ ಸಾಗಾಟ ಕಂಡು ಬಂತು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು, ಲಾರಿಯ ಚಾಲಕ ಮತ್ತು ಕ್ಲೀನರ್‌ನನ್ನು ತರಾಟೆಗೆ ತೆಗೆದುಕೊಂಡರು. ಅವರನ್ನು ಲಾರಿಯಿಂದ ಕೆಳಗಿಳಿಸಿ, ಲಾರಿಗೆ ಬೆಂಕಿ ಹಚ್ಚಿದರು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಾಗವಾಡ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಲಾರಿ ಬೆಂಕಿಗೆ ಆಹುತಿಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು.
ಪ್ರಕರಣ ಕುರಿತು ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರಕರಣ ಸಂಬಂಧ ಎರಡು ಪ್ರತ್ಯೇಕ ಕೇಸ್ ದಾಖಲಾಗಿದೆ. ಕುಡಚಿಯ ಬೇಪಾರಿ ಎನ್ನುವವರು ಗೋಮಾಂಸವನ್ನು ಲಾರಿಯಲ್ಲಿ ತುಂಬಿದ್ದರು. ಗೋಮಾಂಸ ಸಾಗಾಟ ಪ್ರಕರಣದಲ್ಲಿ ಮೂವರನ್ನು, ಗಲಭೆ ಸಂಬಂಧ ನಾಲ್ವರನ್ನು ಬಂಧಿಸಿದ್ದೇವೆ. ವಿಡಿಯೋದಲ್ಲಿ ಕಂಡು ಬಂದ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಗೋಮಾಂಸದ ತುಂಡುಗಳನ್ನು ಲ್ಯಾಬ್‌ಗೆ ಕಳುಹಿಸಲಾಗುವುದು ಎಂದು ತಿಳಿಸಿದರು.