ತುಮಕೂರು ದಸರಾ ಉತ್ಸವ ಪ್ರತಿಯೊಬ್ಬರ ಹಬ್ಬ

KannadaprabhaNewsNetwork |  
Published : Sep 23, 2025, 01:03 AM IST

ಸಾರಾಂಶ

ತುಮಕೂರು ದಸರಾ ಉತ್ಸವವು ಪ್ರತಿಯೊಬ್ಬರ ಹಬ್ಬ. ಪ್ರತಿಯೊಬ್ಬರೂ ಪಾಲ್ಗೊಂಡು ತುಮಕೂರು ದಸರಾ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಜನತೆಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ದಸರಾ ಉತ್ಸವವು ಪ್ರತಿಯೊಬ್ಬರ ಹಬ್ಬ. ಪ್ರತಿಯೊಬ್ಬರೂ ಪಾಲ್ಗೊಂಡು ತುಮಕೂರು ದಸರಾ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಜನತೆಗೆ ಕರೆ ನೀಡಿದರು.

ದಸರಾ ಉತ್ಸವದ ಅಂಗವಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಹಾಸ್ಯ ಚಕ್ರವರ್ತಿ ಶ್ರೀ ಟಿ.ಆರ್. ನರಸಿಂಹರಾಜು ಸಾಂಸ್ಕೃತಿಕ ದಸರಾ ವೈಭವ ವೇದಿಕೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಾಂಸ್ಕೃತಿಕ ದಸರಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಉತ್ಸವವು ಸರ್ಕಾರಿ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ ಎಲ್ಲರನ್ನೊಳಗೊಂಡ ಜನರ ಉತ್ಸವವಾಗಬೇಕು ಎಲ್ಲಾ ಧರ್ಮ, ಜಾತಿ, ಪಕ್ಷವೆಂಬ ಭೇದ-ಭಾವವಿಲ್ಲದೇ ಸಡಗರದಿಂದ ಆಚರಿಸುವ ಹಬ್ಬವಾಗಿದೆ ಎಂದರು.

ಕಳೆದ ವರ್ಷ ಪ್ರಪ್ರಥಮ ಬಾರಿಗೆ ಪ್ರಾರಂಭಿಸಲಾದ ತುಮಕೂರು ದಸರಾ ಉತ್ಸವವು ಜನಮನ್ನಣೆ ಪಡೆದು ಇಡೀ ರಾಜ್ಯದ ಗಮನ ಸೆಳೆದು ಇಂದಿನ ವೈಭವದ ದಸರಾ ಉತ್ಸವ ಆಚರಣೆಗೆ ಉತ್ತೇಜನ ನೀಡಿದೆ. ಯುವಜನತೆ ನಾಡ ಹಬ್ಬ ದಸರಾ ಉತ್ಸವವನ್ನು ಇದೇ ರೀತಿ ಮುಂದುವರೆಸಿಕಡು ಹೋಗಬೇಕೆಂದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

ದಸರಾ ಉತ್ಸವವು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅರಿವು ಬೆಳೆಸಲು ಪೂರಕವಾಗಿದೆ. ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ಪರಂಪರೆ, ವಿಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ, ಆಧುನಿಕ ಭಾರತಕ್ಕೆ ಪೂರಕವಾಗಿ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸಬೇಕು. ಈ ನಿಟ್ಟಿನಲ್ಲಿ ದಸರಾ ಕಲಾ ಮತ್ತು ಜ್ಞಾನ ವೈಭವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.

ಜಿಲ್ಲೆಯ ಸಂಗೀತ, ನಾಟಕ, ನೃತ್ಯ, ಸಾಹಿತ್ಯ, ಕಲೆ ಮತ್ತು ಕವಿಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕ್ಷೇತ್ರದ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದ್ದು, ಮೈಸೂರು ದಸರಾ ಮಾದರಿಯಲ್ಲಿ ತುಮಕೂರು ದಸರಾ ಉತ್ಸವದ ರಸದೌತಣವನ್ನು ಪ್ರತಿಯೊಬ್ಬರೂ ಸವಿಯಬೇಕು ಎಂದು ಹೇಳಿದರು.

ದಸರಾ ಉತ್ಸವದ ಅಂಗವಾಗಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಹಾ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳ ಜೊತೆಗೆ ಹೆಲಿಕಾಪ್ಟರ್ ರೈಡ್, ಫಲ-ಪುಷ್ಪ ಪ್ರದರ್ಶನ, ನಗರದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ, ಉತ್ಸವವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಉಚಿತ ಅಂಬಾರಿ ಬಸ್ ಸೌಲಭ್ಯ, ಅಮಾನಿಕೆರೆಯಲ್ಲಿ ಬೋಟಿಂಗ್, ನೀರಿನ ಮೇಲೆ ರೆಸ್ಟೋರೆಂಟ್, ಸಂಗೀತ ರಸಸಂಜೆ, ಮೊದಲಾದ ವಿಶೇಷ ಅತ್ಯಾಕರ್ಷಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ದಸರಾ ಉತ್ಸವ ಸಂದರ್ಭದಲ್ಲಿ ಪ್ರತಿದಿನ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಬಾರಿ ತುಮಕೂರು ದಸರಾ ವಿಶೇಷವಾಗಿ 240 ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಪರಂಪರೆ ಹಾಗೂ ಇತಿಹಾಸವನ್ನು ಜನತೆ ಮರೆಯಬಾರದೆಂಬ ನಿಟ್ಟಿನಲ್ಲಿ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ, ಹಾಸ್ಯ ಚಕ್ರವರ್ತಿ ಶ್ರೀ ಟಿ.ಆರ್. ನರಸಿಂಹರಾಜು, ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ, ಅಮರಶಿಲ್ಪಿ ಜಕಣಾಚಾರ್ಯ, ಡಾ. ಗುಬ್ಬಿ ವೀರಣ್ಣ, ಶ್ರೀ ಬೆಳ್ಳಾವೆ ನರಹರಿ ಶಾಸ್ತ್ರಿ, ತಿ.ನಂ. ಶ್ರೀಕಂಠಯ್ಯ, ಚಲನಚಿತ್ರ ನಟಿ ಮಂಜುಳಾ ಮುಂತಾದ ಖ್ಯಾತನಾಮರ ಹೆಸರಿನಲ್ಲಿ ವೇದಿಕೆಗಳು ಹಾಗೂ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ ಎಂದರು.

ಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಎಲೆರಾಂಪುರ ಕುಂಚಿಟಿಗರ ಮಹಾ ಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ, ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸ್ವಾಗತಿಸಿದರು. ಜಿಲ್ಲಾಧಿಕಾರಿ ಶುಭಕಲ್ಯಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ವಂದಿಸಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರ್‌, ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಕೆ.ಎನ್. ರಾಜಣ್ಣ, ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ, ಸಿ.ಬಿ. ಸುರೇಶ್‌ಬಾಬು, ಡಾ. ಎಚ್.ಡಿ. ರಂಗನಾಥ್, ಎಚ್.ವಿ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಹಾಗೂ ಚಿದಾನಂದ ಎಂ. ಗೌಡ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ