ತುಮಕೂರು-ಸಾಹಿತ್ಯ ನಿಂತ ನೀರಲ್ಲ, ಹರಿವ ನದಿ: ಡಾ.ಎಸ್. ಕೃಷ್ಣಪ್ಪ

KannadaprabhaNewsNetwork | Published : Dec 27, 2023 1:31 AM

ಸಾರಾಂಶ

ತುಮಕೂರಿನಲ್ಲಿ ದತ್ತಿ ಕಾರ್ಯಕ್ರಮ. ‘ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಸಾಂಸ್ಕೃತಿಕ ನೆಲೆಗಳು’ ವಿಷಯ ಕುರಿತ ಉಪನ್ಯಾಸ

ಕನ್ನಡ ಸಾಹಿತ್ಯದಲ್ಲಿ ವಚನ, ಕೀರ್ತನ ಸಾಹಿತ್ಯ ಸಾಂಸ್ಕೃತಿಕ ನೆಲೆಗಳು ಕುರಿತ ಉಪನ್ಯಾಸ

ತುಮಕೂರು: ಸಾಹಿತ್ಯ ನಿಂತ ನೀರಲ್ಲ, ಅದು ಎಂದೆಂದಿಗೂ ಹರಿಯುವ ನದಿಯಂತೆ, ಪ್ರವಾಹದಂತೆ. ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮೌಲ್ಯಗಳನ್ನು ವಚನಕಾರರು ಹಾಗೂ ದಾಸರು ರಚಿಸಿದ ಅಮರ ಸಾಹಿತ್ಯ ಎಂದು ಚಿಂತಕ ಡಾ.ಎಸ್. ಕೃಷ್ಣಪ್ಪ ನುಡಿದರು.

ತುಮಕೂರು ಜಿಲ್ಲೆ, ತಾಲೂಕು ಮತ್ತು ಗ್ಲೋಬಲ್‌ಪೀಸ್ ವತಿಯಿಂದ ನಡೆದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಲಿಂ. ಗಂಗಮ್ಮ, ಲಿಂ. ನೀಲಮ್ಮ, ಲಿಂ. ಪಟೇಲ್ ಬಸವೇಗೌಡರ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಸಾಂಸ್ಕೃತಿಕ ನೆಲೆಗಳು’ ವಿಷಯವಾಗಿ ಉಪನ್ಯಾಸ ನೀಡಿದರು.

12 ನೇ ಶತಮಾನದ ವಚನ ಚಳುವಳಿ ಒಂದು ಅನನ್ಯವಾದ ಘಟನೆ. ಕ್ರಾಂತಿ, ಚಳವಳಿ ಅಲ್ಲಿನ ವಚನಗಳ ನಿರೂಪಣೆ ಮತ್ತು ನೀಡುವ ಪ್ರತಿಮೆಗಳು ಓದುಗರ ಅರಿವನ್ನು ಹೆಚ್ಚಿಸುವ ಮೌಲ್ಯಗಳಾಗಿವೆ. ತನ್ನ ತಾನರಿಯುವುದೇ ವಚನಗಳ ದಿಟ್ಟ ಮೌಲ್ಯ ಎಂದು ಪ್ರತಿಪಾದಿಸಿದ್ದು ಜಗತ್ತಿನ ಮೊದಲ ಡೆಮಾಕ್ರಸಿ ಹುಟ್ಟಿಕೊಂಡದ್ದೇ ಬಸವಾದಿ ಶರಣರಲ್ಲಿ ಎಂದರು.

ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಮಾತನಾಡಿ, ವಚನ ಸಾಹಿತ್ಯ ಮತ್ತು ಕೀರ್ತನೆಗಳು ಒಂದೇ ಸಾಹಿತ್ಯದ ಎರಡು ಮುಖಗಳಿದ್ದಂತೆ ಎಂದರು. ಶರಣರು ಪರಶಿವನನ್ನು ಅಂಕಿತ ಮಾಡಿಕೊಂಡರೆ, ದಾಸರು ವಿಷ್ಣುವನ್ನು ಅಂಕಿತ ಮಾಡಿಕೊಂಡರು. ಇಬ್ಬರೂ ಸರಳ ಕನ್ನಡದಲ್ಲಿ ಜನಮನವನ್ನು ಗೆದ್ದು ಸಾಹಿತ್ಯ ರಚಿಸಿದ್ದು ಅವಿಸ್ಮರಣೀಯ ಎಂದರು.

ರೋಹಿತ್, ಶಿವಲಿಂಗಯ್ಯ, ಗುರುನಾಥಪ್ಪ, ರೋಹಿಣಿ, ಪವಿತ್ರ, ರೂಪಿಣಿ ವಚನ ಗಾಯನ ನಡೆಸಿದರು. ನಿವೃತ್ತ ಪ್ರಾಚಾರ್ಯ ಎಸ್. ಕುಮಾರಸ್ವಾಮಿ, ಮಿಮಿಕ್ರಿ ಈಶ್ವರಯ್ಯ, ರಾಜಶೇಖರಯ್ಯ ಈಚನೂರು, ನವೀನ್‌ ಕುಮಾರ್, ದೇವಾನಂದ್ ದತ್ತಿ ದಾನಿಗಳ ಪರವಾಗಿ ಮಾತನಾಡಿದರು. ಬಿ. ರಾಜಶೇಖರಯ್ಯ ವಂದಿಸಿದರು. ಹಂ.ಸಿ.ಕುಮಾರಸ್ವಾಮಿ ನಿರೂಪಿಸಿದರು. ಎಸ್.ವಿ. ರವೀಂದ್ರನಾಥ ಠಾಗೂರ್ ಸ್ಪಂದನ ನೀಡಿದರು. ಡಾ. ಎಸ್.ಕೃಷ್ಣಪ್ಪನವರನ್ನು ಸನ್ಮಾನಿಸಲಾಯಿತು.

Share this article