ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾ ಮಹಿಳಾ ಸಂಘಟನೆ ಆಯೋಜಿಸಿದ್ದ ಜಿಲ್ಲಾ ಮಹಿಳಾ ಸಾಂಸ್ಕೃತಿಕ ಸಮ್ಮೇಳನದ ದೇಸೀ ಉತ್ಸವದಲ್ಲಿ ಗ್ರಾಮೀಣ ಬದುಕಿನ ಸಂಭ್ರಮ ಮೇಳೈಸಿತ್ತು. ಬೆಳಿಗ್ಗೆ ಬಿಜಿಎಸ್ ವೃತ್ತದಿಂದ ರಂಗಮಂದಿರವರೆಗೆ ಕುಂಭ ಕಳಸ, ಕಂಸಾಳೆ, ಕೋಲಾಟ ಮತ್ತಿತರ ಜಾನಪದ ಕಲೆಗಳ ಆಕರ್ಷಕ ಪ್ರದರ್ಶನದ ಮೆರವಣಿಗೆ ನಡೆಯಿತು. ನಗರಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಸಮಾಜ ಸೇವಕ ಬಿ.ಬಿ. ಮಹದೇವಯ್ಯ, ಜಿಲ್ಲಾ ಮಹಿಳಾ ಸಂಘಟನೆ ಅಧ್ಯಕ್ಷೆ, ಲೇಖಕಿ ಡಾ.ಬಿ.ಸಿ. ಶೈಲಾನಾಗರಾಜ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಗ್ರಾಮೀಣ ಸೊಗಡು, ಸೊಬಗಿನ ಸಾಂಸ್ಕೃತಿಕ ಕಾರ್ಯಕ್ರಮ, ಧಾನ್ಯ ಬೀಸುವ, ಭತ್ತ ಕುಟ್ಟುವ, ಧಾನ್ಯ ಸ್ವಚ್ಛಗೊಳಿಸುವಂತಹ ಹಳ್ಳಿ ಕುಟುಂಬಗಳ ಮಹಿಳೆಯರ ದೈನಂದಿನ ಚಟುವಟಿಕೆಗಳ ಪ್ರದರ್ಶನ ದೇಸಿ ಉತ್ಸವಕ್ಕೆ ಮೆರಗು ನೀಡಿತ್ತು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ, ಶಬರಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಎಸ್.ಆರ್. ಶಾಂತಲಾ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ದೇಸಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಮ್ಮದೇಸಿ ಕಲೆಗಳಿಗೆ ಒತ್ತುಕೊಟ್ಟು ಹೊಸ ತಲೆಮಾರಿಗೆ ಪರಿಚಯಿಸುವ ಈ ಕಾರ್ಯ ಶ್ಲಾಘನೀಯ. ಇಂತಹ ಕಲೆಗಳಿಗೆ ಪ್ರೋತ್ಸಾಹಕೊಡಬೇಕು, ಅವುಗಳನ್ನು ಅನುಸರಿಸಿ ಹಳೆ ದಿನಗಳನ್ನು ಮತ್ತೆತರಬೇಕು ಎಂದು ಆಶಿಸಿದರು.
ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಈಗ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದ್ದು, ಮಹಿಳಾ ಯುಗ ಪ್ರಾರಂಭವಾಗುತ್ತದೆ ಎಂಬ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ. ಇದು ಮಹಿಳಾ ಸ್ವಾವಲಂಬನೆಗೆ ನಂದಿಯಾಗಿದೆ ಎಂದರು.
ಜಿಲ್ಲಾ ಮಹಿಳಾ ಸಂಘಟನೆ ಅಧ್ಯಕ್ಷೆ ಡಾ.ಬಿ.ಸಿ. ಶೈಲಾ ನಾಗರಾಜ್ ಆಶಯ ನುಡಿಗಳನ್ನಾಡಿ, ನಗರೀಕರಣ, ಜಾಗತೀಕರಣದ ಹೊಡೆತದಲ್ಲಿ ನಮ್ಮಗ್ರಾಮೀಣ ಸಂಸ್ಕೃತಿ ಮರೆಯಾಗುತ್ತಿದೆ. ಅದರ ಮಹಿಮೆ ಸಾರಲು, ಅದನ್ನು ಉಳಿಸಲು ಈಗಿನವರಿಗೆ ತಿಳಿಸಲು ಈ ದೇಸಿ ಉತ್ಸವ ಆಯೋಜಿಸಲಾಗಿದೆ ಎಂದರು.
ಲೇಖಕಿ, ನಿವೃತ್ತ ಸರ್ಕರಿ ನೌಕರರ ಸಂಘದ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ದೇಸಿ ಸಂಸ್ಕೃತಿ ಎಂಬುದು ಕಾಯ ಮತ್ತು ಕಾಯಕದ ಅವಿರ್ಭವಿತ ಚೈತನ್ಯ. ಗ್ರಾಮೀಣ ಪ್ರದೇಶದ ಶ್ರಮಿಕ, ರೈತ ವರ್ಗದ ಬದುಕಿನ ಸಂಸ್ಕೃತಿ. ಈಗ ದೇಶಿ ಸಂಸ್ಕೃತಿ ಮನರಂಜನಾ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಆದು ಪ್ರದರ್ಶನಕ್ಕೆ ಮೀಸಲಾಗದೆ. ನಮ್ಮ ಹಳ್ಳಿ ಸಂಸ್ಕೃತಿ, ಪದ್ಧತಿಯನ್ನು ಯುವ ಪೀಳಿಗೆಗ ಕಲಿಸುವ ಕೆಲಸ ಆಗಬೇಕು. ಕುಟುಂಬಗಳಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಕಲಿಸಲಿ ಎಂದು ಆಶಿಸಿದರು.
BOX
ಬಿಜೆಪಿ ಮುಖಂಡ, ಸ್ಫೂರ್ತಿಡೆವಲಪರ್ಸ್‌ನ ಎಸ್.ಪಿ. ಚಿದಾನಂದ್ ಮಾತನಾಡಿ, ಆಧುನಿಕತೆ ಬೆಳೆದಂತೆ ತಾಂತ್ರಿಕತೆ ಪ್ರಭಾವದಿಂದ ದೇಶಿ ಸಂಸ್ಕೃತಿ ಮೇಲೆ ಒಡೆತ ಬಿದ್ದಿದೆ. ಹಳ್ಳಿಯ ಅನೇಕ ಸಾಂಪ್ರದಾಯಕ ಕಲೆ, ಕಾಯಕಗಳು ಕಣ್ಮರೆಯಾಗಿವೆ. ಎಲ್ಲವನ್ನು ನಿರ್ವಹಣೆ ಮಾಡಲು ಯಂತ್ರಗಳ ಬಳಕೆ ಮಾಡುತ್ತಾ ಕೆಲಸ ಸುಲಭವಾಗುತ್ತಿದೆ. ಆದರೆ ಹಳ್ಳಿ ಪದ್ಧತಿಗಳ ಒಳಗೊಳ್ಳುವಿಕೆ, ಸಹಬಾಳ್ವೆಯ ಆಚರಣೆಗಳು ಮರೆಯಾಗಿವೆ. ಅವುಗಳನ್ನು ನಮ್ಮ ಮಕ್ಕಳಿಗೆ ತಿಳಿಸಿ ಕಲಿಸುವ ಕೆಲಸವಾದರೆ ದೇಶಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬಹುದು ಎಂದು ಸ್ಫೂರ್ತಿಡೆವಲಪರ್ಸ್‌ನ ಎಸ್.ಪಿ. ಚಿದಾನಂದ್ ತಿಳಿಸಿದರು.