ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತುಮಕೂರು ರಾಜ್ಯಕ್ಕೆ ಪ್ರಥಮ

KannadaprabhaNewsNetwork |  
Published : Feb 28, 2026, 02:00 AM IST
ಜ | Kannada Prabha

ಸಾರಾಂಶ

ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ವ ಸಿದ್ಧತಾ ಕಾರ್ಯದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿದ ಸಂಬಂಧ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ವ ಸಿದ್ಧತಾ ಕಾರ್ಯದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿದ ಸಂಬಂಧ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿದ ಅವರು, ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಶೇ. 80ಕ್ಕಿಂತ ಅತಿ ಹೆಚ್ಚು ಸಾಧನೆ ಮಾಡಿದ ರಾಜ್ಯದ 16 ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆ ಶೇ.91.19ರಷ್ಟು ಸಾಧನೆ ಮಾಡಿ ಪ್ರಥಮ ಸ್ಥಾನದಲ್ಲಿದೆ. ಮತದಾರರ ಪಟ್ಟಿ ಮ್ಯಾಪಿಂಗ್ ಮತ್ತು ಕುಟುಂಬ ಸದಸ್ಯರ ಜೋಡಣೆ ಕಾರ್ಯದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಮ್ಮ ತಂಡದೊಂದಿಗೆ ಉತ್ತಮ ಕಾರ್ಯ ನಿರ್ವಹಿಸಿದ್ದು, ಅವರಿಗೆ ಆಯೋಗದ ಪರವಾಗಿ ಶುಭಾಶಯ ಕೋರುತ್ತೇನೆ ಎಂದು ಅವರು ತಿಳಿಸಿದರು.

15 ದಿನಗಳಿಗೊಮ್ಮೆ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದ್ದು, ಕಳೆದ ಸಭೆಯಲ್ಲಿ ತುಮಕೂರು ಜಿಲ್ಲೆಯ ಶೇಕಡಾವಾರು ಪ್ರಗತಿ 4.45 ಆಗಿದ್ದು, ಈ ವಿಷಯದಲ್ಲೂ ತುಮಕೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

ತುಮಕೂರು ಜಿಲ್ಲೆಯ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ತಿಪಟೂರು, ಗುಬ್ಬಿ, ಮಧುಗಿರಿ ಮತ್ತು ತುಮಕೂರು ತಾಲೂಕುಗಳಲ್ಲಿಯೂ ಕೂಡ ಉತ್ತಮ ಸಾಧನೆಯಾಗಿದ್ದು, ಸಂಬಂಧಿಸಿದ ತಾಲೂಕುಗಳ ತಹಸೀಲ್ದಾರರು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಆಯೋಗದಿಂದ ಶುಭ ಕಾಮನೆಗಳನ್ನು ತಿಳಿಸಲು ಬಯಸುತ್ತೇನೆ ಎಂದರು.

ಮುಂದಿನ ಸಭೆಯ ಹೊತ್ತಿಗೆ ರಾಜ್ಯದ ಎಲ್ಲಾ ಜಿಲ್ಲೆಗಳು ಶೇ.,95 ರಷ್ಟು ಪ್ರಗತಿಯನ್ನು ಸಾಧಿಸಬೇಕು ಎಂದ ಅವರು, ಪರಿಷ್ಕರಣೆ ಕಾರ್ಯ ಕುಂಠಿತವಾಗಿರುವ ತಾಲೂಕುಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.

ಆನ್‌ಲೈನ್ ಸಭೆಯ ನಂತರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಂದಿನ ಸಭೆಯ ಹೊತ್ತಿಗೆ ಜಿಲ್ಲೆ ಶೇ. 95ರಷ್ಟು ಪ್ರಗತಿ ಸಾಧನೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ತುಮಕೂರು ಮಹಾನಗರಪಾಲಿಕೆ ಆಯುಕ್ತೆ ಶುಭ, ಜಿಲ್ಲಾ ಚುನಾವಣಾ ತಹಸೀಲ್ದಾರ್ ನಾಗಭೂಷಣ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮ ದಿನಾಚರಣೆ: ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ
ಭೂಮಿಯ ಮೂಲ ಹಕ್ಕುದಾರರಿಗೆ ಆದೇಶಕ್ಕೆ ಆಗ್ರಹಿಸಿ ಪ್ರತಿಭಟನೆ