
ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿ ವರ್ಷದಂತೆ ಈ ಬಾರಿಯೂ ಮುಂಜಾನೆ ನಡೆದ ಹೆತ್ತೇನಹಳ್ಳಿಯಮ್ಮನ ರಥೋತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಾಕ್ಷಿಯಾಯಿತು.
ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಹೆತ್ತೇನಹಳ್ಳಿ, ಕೈದಾಳ, ಗೂಳೂರು, ಕಂಭತ್ತನಹಳ್ಳಿ, ರಂಗಯ್ಯನಪಾಳ್ಯ, ಕುಮಂಜಿಪಾಳ್ಯ, ಚಿಕ್ಕಸಾರಂಗಿ, ಗಳಿಗೇನಹಳ್ಳಿ, ನಂದಿಹಳ್ಳಿ, ಹೊಸಹಳ್ಳಿ, ನರುಗನಹಳ್ಳಿ, ಮಾಯಣ್ಣಗೌಡನ ಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳಲ್ಲಿ ಹೆತ್ತೇನಹಳ್ಳಿಯಮ್ಮನ ಜಾತ್ರೆಗೆ ವಿಶೇಷವಾಗಿಯೇ ಭಕ್ತ ಸಮೂಹ ಸಜ್ಜಾಗುತ್ತಾರೆ. ಅದರಂತೆ ಸೋಮವಾರ ಇಡೀ ದಿನ ಭಕ್ತರು ಉಪವಾಸ ವ್ರತ ಮಾಡಿ ಮುಂಜಾನೆ ಅಗ್ನಿಕೊಂಡ ಹಾಯ್ದು ಅಮ್ಮನವರಿಗೆ ಹರಕೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.ಇನ್ನು ಈ ಭಾಗದ ಹೆಣ್ಣು ಮಕ್ಕಳು ಅಮ್ಮನವರಿಗೆ ಬಾಯಿ ಬೀಗದ ಹರಕೆ ತೀರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹದಿ ಹರೆಯದ ಹೆಣ್ಣು ಮಕ್ಕಳು, ಮಹಿಳೆಯರು ಸಹ ಉಪವಾಸ ವ್ರತ ಮಾಡಿ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ಬಾಯಿಬೀಗ ಹಾಕಿಸಿಕೊಂಡು ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು.
ನಾಡಿನ ನಾನಾ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಅಗ್ನಿಕೊಂಡ ಹಾಯ್ದರು. ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ವರ್ಣರಂಜಿತವಾಗಿ ಅಲಂಕರಿಸಲಾಗಿದ್ದ ರಥಕ್ಕೆ ಹೆತ್ತೇನಹಳ್ಳಿಯಮ್ಮ ದೇವಿಯನ್ನು ಕೂರಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಅಮ್ಮನವರ ಅರ್ಚಕರು, ತಹಸೀಲ್ದಾರ್ ರಥದ ಗಾಲಿಗೆ ತೆಂಗಿನ ಕಾಯಿ ಒಡೆದು ಅಮ್ಮನವರಿಗೆ ಪೂಜೆ ಸಲ್ಲಿಸಿದ ನಂತರ ರಥದ ಗಾಲಿ ಒಂದು ಸುತ್ತು ಉರುಳುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ರಥಕ್ಕೆ ಹೂವು, ದವನ, ಬಾಳೆಹಣ್ಣು ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡಿದ್ದ ಹರಕೆಯನ್ನು ತೀರಿಸಿದರು.