ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ವಿಶ್ವವಿದ್ಯಾನಿಲಯದ 19 ನೇ ವಾರ್ಷಿಕ ಘಟಿಕೋತ್ಸವ ಜೂನ್ 3 ರಂದು ಬುಧವಾರ ಬೆಳಗ್ಗೆ 11.30 ಗಂಟೆಗೆ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ ಜರುಗಲಿದೆ.
ಈ ಬಾರಿಯ ಘಟಿಕೋತ್ಸವದಲ್ಲಿ ಒಬ್ಬ ಅಭ್ಯರ್ಥಿ ಡಿ.ಲಿಟ್ ಪದವಿ, 59 ಅಭ್ಯರ್ಥಿಗಳು ಪಿಎಚ್.ಡಿ. ಪದವಿ, 2,058 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8,781 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ (ಒಟ್ಟು 10,839 ಅಭ್ಯರ್ಥಿಗಳು). ವಿಶ್ವವಿದ್ಯಾನಿಲಯವು ಎಲ್ಲ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂ ಕುಗಳನ್ನು (ಎಂಎಸ್ಸಿ ವಿದ್ಯುನ್ಮಾನ ಮಾಧ್ಯಮ- 2 ರ್ಯಾಂ ಕ್), ಬಿಎ/ಬಿಎಸ್‌ಡಬ್ಲ್ಯೂ /ಬಿಎಸ್‌ಸಿ/ಬಿಕಾಂ/ಬಿಬಿಎಂ/ಬಿಇಡಿ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ್ಯಾಂ ಕುಗಳನ್ನು (ಬಿಎಸ್ಸಿ ಫ್ಯಾಶನ್ ಅಂಡ್ ಅಪಾರೆಲ್ ಡಿಸೈನಿಂಗ್- 1 ರ್ಯಾಂ ಕ್, ಬಿ.ವೋಕ್ – 3 ರ್ಯಾಂ ಕ್) ಘೋಷಿಸಿದೆ. ಒಟ್ಟು 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳನ್ನು, ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ವಿಶ್ವವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನಮಾಡಲಿದೆ.ಘಟಿಕೋತ್ಸವಕ್ಕೂ ಮುನ್ನ ರಾಜ್ಯಪಾಲರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಗೊಂಡಿರುವ ‘ತುಮಕೂರು ಇನ್ನೋವೇಶನ್ ಇನ್‌ಕ್ಯುಬೇಶನ್ ಆ್ಯಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್’ ಹಾಗೂ ‘ಗೋ ಗ್ರೀನ್ - ಬೈಸಿಕಲ್ ಇನೀಶಿಯೇಟಿವ್’ಗಳನ್ನು ಉದ್ಘಾಟಿಸಲಿದ್ದಾರೆ ಎಂದು ಕುಲಪತಿ ವೆಂಕಟೇಶ್ವರಲು ಹಾಗೂ ಕುಲಸಚಿವ ಪ್ರೊ. ಮೋಹನ್ ಎಚ್.ಎಸ್ ತಿಳಿಸಿದ್ದಾರೆ.ಇಪ್ಪತ್ತೆರಡು ವರ್ಷಗಳನ್ನು ಪೂರೈಸಿರುವ ತುಮಕೂರು ವಿಶ್ವವಿದ್ಯಾನಿಲಯವು ಬೋಧನೆ, ಸಂಶೋಧನೆ, ವಿಸ್ತರಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ರಾಜ್ಯ ಮತ್ತುರಾಷ್ಟ್ರಮಟ್ಟದಲ್ಲಿ ತನ್ನದೇ ಆದಛಾಪು ಮೂಡಿಸಿದೆ. 91 ಸಂಯೋಜಿತ ಕಾಲೇಜುಗಳು, ಎರಡು ಘಟಕ ಕಾಲೇಜುಗಳು, 32 ಸ್ನಾತಕೋತ್ತರ ಕೋರ್ಸುಗಳು, 19 ಪಿಎಚ್‌ಡಿ ಅಧ್ಯಯನ ವಿಭಾಗಗಳು, ಹೊಸಕಾಲದ ಅಗತ್ಯಗಳಿಗೆ ಅನುಗುಣವಾದ ಡಿಪ್ಲೊಮಾ ಕೋರ್ಸುಗಳಿಂದ ಕೂಡಿರುವ ತುಮಕೂರು ವಿಶ್ವವಿದ್ಯಾನಿಲಯ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 35,523 ವಿದ್ಯಾರ್ಥಿಗಳು ಸ್ನಾತಕ ಪದವಿಗಳಿಗೆ ಹಾಗೂ 3,742 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.