ತುಂಗಾ ಮೇಲ್ದಂಡೆ ಯೋಜನೆ ತುಂಗಾ ನಾಲೆ ಒಡೆದು ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಎಕರೆ ಬೆಳೆ ಜಲಾವೃತ

KannadaprabhaNewsNetwork |  
Published : Aug 26, 2024, 01:32 AM ISTUpdated : Aug 26, 2024, 01:00 PM IST
tungabhadra

ಸಾರಾಂಶ

ತುಂಗಾ ಮೇಲ್ದಂಡೆ ಯೋಜನೆ ತುಂಗಾ ನಾಲೆ ಒಡೆದು ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತವಾದ ಘಟನೆ ಹೊನ್ನಾಳಿ ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ರೈತರು ತೀವ್ರ ಆತಂಕಕ್ಕೆ ತುತ್ತಾಗಿದ್ದಾರೆ.

 ದಾವಣಗೆರೆ :  ತುಂಗಾ ಮೇಲ್ದಂಡೆ ಯೋಜನೆ ತುಂಗಾ ನಾಲೆ ಒಡೆದು ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತವಾದ ಘಟನೆ ಹೊನ್ನಾಳಿ ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ರೈತರು ತೀವ್ರ ಆತಂಕಕ್ಕೆ ತುತ್ತಾಗಿದ್ದಾರೆ.

ತುಂಗಾ ಮೇಲ್ದಂಡೆ ಯೋಜನೆಯ ತುಂಗಾ ನಾಲೆಯ ಒಂದು ಭಾಗದಲ್ಲಿ ಶಿಥಿಲಗೊಂಡಿದ್ದು, ಭಾನುವಾರ ಏಕಾಏಕಿ ನಾಲೆ ಒಡೆದಿದೆ. ಪರಿಣಾಮ ನಾಲೆ ಪಕ್ಕದ ಸಾವಿರಾರು ಎಕರೆ ಜಮೀನು, ತೋಟಗಳಿಗೆ ನೀರು ರಭಸವಾಗಿ ನುಗ್ಗಿದೆ. ಅಡಕೆ, ಬತ್ತ, ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ನೀರು ನುಗ್ಗಿದೆ. ವಿಚಾರ ತಿಳಿಯುತ್ತಿದ್ದಂತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಥಳಕ್ಕೆ ಧಾವಿಸಿದರು.

ರೇಣುಕಾಚಾರ್ಯರಿಗೆ ಮನವಿ:

ಬಸವನಹಳ್ಳಿ ಗ್ರಾಮದ ಬಳಿ ರೈತರು ತುಂಗಾ ಮೇಲ್ದಂಡೆ ಯೋಜನೆಯ ತುಂಗಾ ನಾಲೆ ಒಡೆದು, ಸಾವಿರಾರು ಎಕರೆ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ನಾಲೆಯಿಂದ ಬರುತ್ತಿರುವ ನೀರನ್ನು ಬಂದ್ ಮಾಡಿ, ತ್ವರಿತವಾಗಿ ನಾಲೆ ದುರಸ್ತಿ ಕೈಗೊಳ್ಳದಿದ್ದರೆ ಬೆಳೆಗಳೆಲ್ಲಾ ಹಾಳಾಗಲಿವೆ. ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ನಾಲಾ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯ ರೈತರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಒತ್ತಾಯಿಸಿದರು.

ಬೆಳೆಗಳ ಉಳಿಸಲು ಮನವಿ

ಬಸವನಹಳ್ಳಿ ಭಾಗದ ರೈತರು ಸಾಕಷ್ಟು ಸಲ ನಾಲೆ ದುರಸ್ತಿ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದರೂ ನೀರಾವರಿ ಇಲಾಖೆ ಗಮನಹರಿಸಲಿಲ್ಲ. ತುಂಗಾ ಮೇಲ್ದಂಡೆಯ ಒಂದು ಬದಿಯ ಒಂದಿಷ್ಟು ಭಾಗವು ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ಜಮೀನು, ಹೊಲ, ತೋಟಗಳಿಗೆ ನುಗ್ಗಿ, ಬೆಳೆ ಹಾನಿಯಾಗಿದೆ. ಹೊಲ, ಗದ್ದೆ, ತೋಟಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ಗದ್ದೆ, ತೋಟಗಳಲ್ಲಿ ಸುಮಾರು 3-4 ಅಡಿಗೂ ಹೆಚ್ಚು ನೀರು ನಿಂತಿದ್ದು, ನಮ್ಮ ಬೆಳೆಗಳನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು.

ಸ್ಥಳದಿಂದಲೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ನಾಲೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗಿ, ಬೆಳೆ ಹಾಳಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಬಸವನಹಳ್ಳಿ ಗ್ರಾಮದ ಬಳಿ ತುಂಗಾ ಮೇಲ್ದಂಡೆ ನಾಲೆಯಿಂದ ಹೊಲ, ಗದ್ದೆ,ತೋಟಗಳಿಗೆ ನೀರು ನುಗ್ಗುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು. ರೈತರು ಸಹ ಅದಕ್ಕೆ ಧ್ವನಿಗೂಡಿಸಿದರು.

ನಾಲೆ ನೀರು ಹಳ್ಳಕ್ಕೆ:

ನಾಲೆ ಒಡೆದ ವಿಚಾರ ತಿಳಿಯುತ್ತಿದ್ದಂತೆಯೇ ನೀರಾವರಿ ಇಲಾಖೆಯ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಹೊಳಲೂರು ಮತ್ತು ನ್ಯಾಮತಿ ತಾಲೂಕಿನ ಗಂಗನಕೋಟೆ ಗ್ರಾಮದಲ್ಲಿ ಬಳಿ ತುಂಗಾ ಮೇಲ್ದಂಡೆ ನಾಲೆ ನೀರನ್ನು ಹಳ್ಳಕ್ಕೆ ತಿರುಗಿಸಿ, ಬಸವನಹಳ್ಳಿ ಕಡೆಗೆ ಬರುತ್ತಿದ್ದ ನೀರನ್ನು ತಡೆದಿದ್ದಾರೆ. ಆದರೂ, ನಾಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಬಸವನಹಳ್ಳಿ ಗ್ರಾಮದ ಬಳಿ ನಾಲೆಯಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಜಮೀನು, ಗದ್ದೆ, ತೋಟಗಳಿಗೆ ನುಗ್ಗುತ್ತಲೆ ಇದ್ದುದು ಸಾಮಾನ್ಯವಾಗಿತ್ತು.

ತುಂಗಾ ಮೇಲ್ದಂಡೆ ಯೋಜನೆ ಇಇ ಕೃಷ್ಣಮೂರ್ತಿ, ತುಂಗಾ ಮೇಲ್ದಂಡೆ ಯೋಜನೆ ಎಇಇ ಮಂಜುನಾಥ ಇದ್ದರು. ಎಡ ನಾಲೆ ನೀರು ನಿಲ್ಲಿಸಲು ಸಕಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ರೈತರಿಗೆ ಪ್ರತಿಕ್ರಿಯಿಸಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ನೀವು ಆದಷ್ಟು ತ್ವರಿತವಾಗಿ ನೀರು ಬಂದ್ ಮಾಡಿ, ಜಲ ಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರ ಬಳಿ ಮಾತನಾಡಲು ನಾನು ಪ್ರಯತ್ನ ನಡೆಸಿದ್ದೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!