ಕೊಪ್ಪಳ/ ಮುನಿರಾಬಾದ್: ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಆ. 26 ರಂದು ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ತಾಲೂಕಿನ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನದ ಕಚೇರಿ ಸಭಾಂಗಣದಲ್ಲಿ ಕರೆದ ಶ್ರೀಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಉತ್ಸವ ಆಚರಣೆಯ ಕುರಿತ ಪೂರ್ವ ಸಿದ್ಧತಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಶ್ರೀಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ಆ.26ರ ಮಂಗಳವಾರ ಸಂಜೆ 6.30ಕ್ಕೆ ನಡೆಸಲಾಗುವುದು. ತುಂಗಭದ್ರಾ ಆರತಿ ದಿನ ಗರ್ಭಗುಡಿಯಲ್ಲಿ ಶ್ರೀ ದೇವಿಯವರಿಗೆ ವಿಶೇಷ ಹೂವಿನ ಅಲಂಕಾರ, ಒಳಭಾಗ, ಹೊರಭಾಗ, ಸುತ್ತಲೂ, ಮುಂಭಾಗದ ಗೋಪುರದ ಕೈಪಿಡಿ ಗೊಂಬೆಗಳಿಗೆ ಮತ್ತು ನದಿ ತೀರದಲ್ಲಿ ವೇದಿಕೆಗೆ ಹೂವಿನ ಅಲಂಕಾರ ಮಾಡಲಾಗುವುದು. ತುಂಗಭದ್ರಾ ಆರತಿ ಬಗ್ಗೆ, ವ್ಯಾಪಕ ಪ್ರಚಾರ ಮಾಡಲು 20 ಪ್ಲೆಕ್ಸ್ ಬ್ಯಾನರ್ ಮಾಡಿಸಿ, ಹುಲಿಗಿ ಸರ್ಕಲ್, ನಿಂಗಾಪುರ ಕ್ರಾಸ್, ರೈಲ್ವೆ ಗೇಟು ಹತ್ತಿರ, ಶಿವಪುರ ರಸ್ತೆ, ಹಿಟ್ನಾಳ್ ಕಮಾನಿನ ಹತ್ತಿರ ಮತ್ತು ಹೊಸಪೇಟೆ, ಕೊಪ್ಪಳ, ಗಂಗಾವತಿಯಲ್ಲಿಯೂ ಅಂಟಿಸಿ ಹೆಚ್ಚಿನ ಪ್ರಚಾರಪಡಿಸುವ ಉದ್ದೇಶ ಹೊಂದಲಾಗಿದೆ. ದೇವಸ್ಥಾನಕ್ಕೆ ಮತ್ತು ನದಿ ತೀರದಲ್ಲಿ, ವೇದಿಕೆ, ಲೈಟಿಂಗ್ ಡೆಕೊರೇಶನ್ ಮಾಡಬೇಕು ಮತ್ತು ನದಿಯಲ್ಲಿರುವ ಬಂಡೆಗಳಿಗೆ ಸ್ಪಾಟ್ ಲೈಟುಗಳನ್ನು ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ದೇವಸ್ಥಾನದ ಪೂರ್ವ ಗೋಪುರದಿಂದ ನದಿ ತೀರದವರೆಗೆ ಮತ್ತು ದೇವಸ್ಥಾನದ ಮುಂಭಾಗದಿಂದ 2ನೇ ಗೇಟಿನವರೆಗೆ ರೆಡ್ ಮ್ಯಾಟ್ ಹಾಕಲಾಗುವುದು. ದೇವಸ್ಥಾನದ ತಾಯಿ ಮುದ್ದಮ್ಮನ ಕಟ್ಟೆಯಿಂದ ಗಣ್ಯ ಮಾನ್ಯರನ್ನು ಕುಂಭ ಮತ್ತು ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಕರೆ ತಂದು ದರ್ಶನದ ನಂತರ ನದಿ ತೀರದ ವೇದಿಕೆಗೂ ಸಹ ವಾದ್ಯದೊಂದಿಗೆ ಅವರನ್ನು ಕರೆದುಕೊಂಡು ಹೋಗುವ ವಿವಿಧ ಧಾರ್ಮಿಕ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಹುಲಿಗೆಮ್ಮ ದೇವಿ ದೇವಸ್ಥಾನದ 2025ರ ಜಾತ್ರೆಯಲ್ಲಿ ಮಹಾದಾಸೋಹದಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಸೇವಾಕರ್ತರಿಗೆ ಸನ್ಮಾನ ಮಾಡಲಾಗುವುದು. ಬೆಳಗ್ಗೆ ಹೋಮಕ್ಕೆ ಮತ್ತು ತುಂಗಭದ್ರಾ ಆರತಿಗೆ 15 ಜನ ಅರ್ಚಕರನ್ನು ಕರೆಸಿ ಅವರಿಗೆ ಒಂದೇ ತರಹದ ಸಮವಸ್ತ್ರ ಕೊಡಿಸಲಾಗುವುದು. ಇದಲ್ಲದೆ ಚಂಡಿಕಾ ಹೋಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿ ಗ್ರಾಮದ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಪ್ರಥಮ ಬಾರಿಗೆ ತುಂಗಭದ್ರಾ ಆರತಿ ಉತ್ಸವ ತುಂಗಭದ್ರಾ ನದಿಯ ತೀರದಲ್ಲಿ ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಈ ಉತ್ಸವವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ಪ್ರಮುಖವಾಗಿ ಐದು ಕಮಿಟಿಗಳನ್ನು ರಚಿಸಲಾಗಿದೆ. ಈ ಉತ್ಸವದ ನಿಮಿತ್ತ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಅನ್ನ ಸಂತರ್ಪಣೆ ಮತ್ತು ವಿಶೇಷವಾಗಿ ತುಂಗಭದ್ರಾ ಆರತಿ ಉತ್ಸವವನ್ನು ಶ್ರೀದೇವಿಯವರಿಗೆ ವಿಶೇಷ ಹೂವಿನ ಅಲಂಕಾರ, ದೇವಸ್ಥಾನಕ್ಕೆ ಮತ್ತು ನದಿ ತೀರದಲ್ಲಿ ಮತ್ತು ವೇದಿಕೆಗೆ ವಿಶೇಷ ಲೈಟಿಂಗ್ ಡೆಕೊರೇಶನ್ ಹಾಗೂ ನದಿಯಲ್ಲಿರುವ ಬಂಡೆಗಳಿಗೆ ಸ್ಪಾಟ್ ಲೈಟ್ ಹಾಕಲಾಗುತ್ತಿದೆ ಎಂದು ಹೇಳಿದರು.
ತುಂಗಭದ್ರಾ ಆರತಿ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಧಾರ್ಮಿಕ ದತ್ತಿ ಆಯುಕ್ತರು, ಸಂಸದರು, ಶಾಸಕರು ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್, ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದ್ಯಸರು ಸೇರಿದಂತೆ ಫಾಲಾಕ್ಷಪ್ಪ ಗುಂಗಾಡಿ, ಪಂಪಾಪತಿ ರಾಟಿ, ಎ. ಧರ್ಮರಾವ್, ವೆಂಕಟೇಶ ವಡ್ಡರ, ಪ್ರಭುರಾಜ್ ಪಾಟೀಲ ಮತ್ತು ಹುಲಿಗೆಮ್ಮ ದೇವಸ್ಥಾನದ ಸಿಬ್ಬಂದಿಗಳು, ಹುಲಿಗಿ ಗ್ರಾಪಂ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.