ಕೃಷ್ಣ ಲಮಾಣಿ
ಜಲಾಶಯದ ಹಳೇ ಗೇಟ್‌ಗಳ ತೆರವು ಕಾರ್ಯ ಭರದಿಂದ ಸಾಗಿದ್ದು, ಹೊಸ ಗೇಟ್‌ಗಳ ಅಳವಡಿಕೆಗೆ ಪ್ಲಾನ್ ಕೂಡ ರೂಪಿಸಲಾಗಿದೆ. ಡಿಸೆಂಬರ್ 20ರ ಬಳಿಕ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭವಾಗಲಿದೆ.
ಗುಜರಾತ್ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಟೂಲ್ಸ್ ಕಂಪನಿ ₹52 ಕೋಟಿಗೆ ಹೊಸ ಗೇಟ್‌ಗಳ ನಿರ್ಮಾಣ ಮತ್ತು ಅಳವಡಿಕೆಗೆ ಟೆಂಡರ್ ಪಡೆದಿದೆ. ಜಲಾಶಯದ 33 ಕ್ರಸ್ಟ್ ಗೇಟ್‌ಗಳ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ 15 ಗೇಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಆಂಧ್ರಪ್ರದೇಶ ಸರ್ಕಾರ ₹20 ಕೋಟಿ ಮತ್ತು ಕರ್ನಾಟಕ ಸರ್ಕಾರ ₹10 ಕೋಟಿ ಬಿಡುಗಡೆ ಮಾಡಿದೆ.ಹಳೇ ಗೇಟ್ ತೆರವು: ಜಲಾಶಯದಲ್ಲಿ ಹಳೇ ಗೇಟ್‌ಗಳ ತೆರವು ಕಾರ್ಯ ಆರಂಭಗೊಂಡಿದೆ. ಈಗಾಗಲೇ 18ನೇ, 20ನೇ, 24ನೇ ಗೇಟ್‌ಗಳನ್ನು ಪರಿಣತ ಕಾರ್ಮಿಕರನ್ನು ಬಳಸಿ ತೆರವು ಮಾಡಲಾಗಿದೆ. ಜಲಾಶಯದ 27ನೇ ಕ್ರಸ್ಟ್ ಗೇಟ್ ತೆರವು ಕಾರ್ಯ ಆರಂಭಗೊಂಡಿದೆ. ಜಲಾಶಯದ ಹಳೇ ಗೇಟ್‌ಗಳನ್ನು ತೆರವು ಮಾಡುವ ಕಾರ್ಯ ಒಂದು ಕಡೆ ನಡೆದರೆ ಇನ್ನೊಂದೆಡೆ ಹೊಸ ಗೇಟ್‌ಗಳ ಅಳವಡಿಕೆಗೂ ತುಂಗಭದ್ರಾ ಮಂಡಳಿ ಪ್ಲಾನ್ ರೂಪಿಸಿದೆ.
ಜಲಾಶಯದ ನೀರಿನ ಮಟ್ಟ 1613 ಅಡಿಗೆ ಇಳಿಕೆಯಾದ ಕೂಡಲೇ ಹೊಸ ಗೇಟ್‌ಗಳ ಅಳವಡಿಕೆಗೆ ಪ್ಲಾನ್ ರೂಪಿಸಲಾಗಿದೆ. ಆಗ ಜಲಾಶಯದಲ್ಲಿ 43 ಟಿಎಂಸಿ ನೀರು ಸಂಗ್ರಹ ಇರಲಿದೆ. ಈಗಾಗಲೇ ನಿತ್ಯ 5900 ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. 10,933 ಕ್ಯುಸೆಕ್ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಕಾಲುವೆ ಮತ್ತು ನದಿಗೆ ನೀರು ನಿರಂತರ ಹರಿಸುವುದರಿಂದ ಇನ್ನು ಐದಾರು ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ 1618.95 ಅಡಿಯಿಂದ 1613 ಅಡಿಗೆ ಬರಲಿದೆ. ಇದಕ್ಕಾಗಿ ಈಗ ನದಿಗೂ ನೀರು ಹರಿಸಲಾಗುತ್ತಿದೆ. ಡಿಸೆಂಬರ್ 20ರ ಬಳಿಕ ಜಲಾಶಯದಲ್ಲಿ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭವಾಗಲಿದೆ. 2026ರ ಜೂನ್ ಹೊತ್ತಿಗೆ ಎಲ್ಲ ಗೇಟ್‌ಗಳನ್ನು ಅಳವಡಿಕೆ ಮಾಡಲಾಗುವುದು ಎಂದು ತುಂಗಭದ್ರಾ ಮಂಡಳಿ ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯ್ಕ ಕನ್ನಡಪ್ರಭಕ್ಕೆ ತಿಳಿಸಿದರು.ಜಲಾಶಯ ರಾಜ್ಯದ 10 ಲಕ್ಷ ಎಕರೆಗೆ ನೀರು ಒದಗಿಸುತ್ತದೆ. ಇನ್ನು ಆಂಧ್ರಪ್ರದೇಶದಲ್ಲಿ 3 ಲಕ್ಷ ಎಕರೆಗೂ ಅಧಿಕ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಹಾಗಾಗಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳಿಗೆ ಈ ಜಲಾಶಯ ಜೀವನಾಡಿ ಆಗಿದೆ. ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳೆದ ವರ್ಷ ಕಳಚಿ ಬಿದ್ದ ಬಳಿಕ ಜಲಾಶಯದ ಗೇಟ್‌ಗಳ ಪರಿಶೀಲನೆ ನಡೆಸಿದಾಗ ಜಲಾಶಯದ ಆಯುಷ್ಯ ಮುಗಿದಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಆ ಬಳಿಕ ಪರಿಣತರ ತಂಡಗಳು ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್‌ಗಳ ತೆರವಿಗೆ ವರದಿ ನೀಡಿದ್ದವು. ಈಗ 15 ಕ್ರಸ್ಟ್ ಗೇಟ್‌ಗಳು ಸಿದ್ಧಗೊಂಡಿವೆ. ಇನ್ನುಳಿದ ಗೇಟ್‌ಗಳ ನಿರ್ಮಾಣ ಕೂಡ ಭರದಿಂದ ಸಾಗಿದೆ.
ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ನಿರ್ಮಾಣಕ್ಕಾಗಿ ಪ್ಲಾನ್ ರೂಪಿಸಲಾಗಿದೆ. ಡಿಸೆಂಬರ್ 20ರ ಬಳಿಕ ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭವಾಗಲಿದೆ ಎನ್ನುತ್ತಾರೆ ತುಂಗಭದ್ರಾ ಮಂಡಳಿ ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯ್ಕ.