ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ತುಂಗಭದ್ರಾ ರೈತ ಸಂಘ ಆಗ್ರಹ

KannadaprabhaNewsNetwork |  
Published : Oct 05, 2026, 02:00 AM IST
ತುಂಗಭದ್ರಾ ಜಲಾಶಯದಲ್ಲಿ ಸದ್ಯ ಸಾಕಷ್ಟು ನೀರಿನ ಸಂಗ್ರಹವಿದ್ದು, ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಗ್ರಾಮೀಣ ಶಾಸಕ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿ ಅ .4ರ ಮಾಹಿತಿಯಂತೆ 68 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 10 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಟ್ಟರೆ 58 ಟಿಎಂಸಿ ಉಳಿಯಲಿದೆ.

ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ಸದ್ಯ ಸಾಕಷ್ಟು ನೀರಿನ ಸಂಗ್ರಹವಿದ್ದು, ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವ ಮೂಲಕ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರ ಬೆಳೆ ರಕ್ಷಿಸಬೇಕು ಎಂದು ತುಂಗಭದ್ರಾ ರೈತ ಸಂಘ ಒತ್ತಾಯಿಸಿದೆ.

ಈ ಕುರಿತು ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ಡಾ. ಪರುಷೋತ್ತಮಗೌಡ ನೇತೃತ್ವದ ರೈತರ ನಿಯೋಗವು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರಗೆ ಭಾನುವಾರ ಮನವಿ ಸಲ್ಲಿಸಿ ಕಾಲುವೆಗಳಿಗೆ ನೀರು ಹರಿಸುವ ವಿಷಯದಲ್ಲಿ ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಹಾಗೂ ಸಂಬಂಧಿಸಿದ ನೀರಾವರಿ ಅಧಿಕಾರಿಗಳ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿತು.

ತುಂಗಭದ್ರಾ ಜಲಾಶಯದಲ್ಲಿ ಅ .4ರ ಮಾಹಿತಿಯಂತೆ 68 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 10 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಟ್ಟರೆ 58 ಟಿಎಂಸಿ ಉಳಿಯಲಿದೆ. ಸುಮಾರು 6 ಟಿಎಂಸಿ ನೀರನ್ನು ಆವಿಯಾಗುವಿಕೆ ಸೇರಿದಂತೆ ಇತರೆ ನಷ್ಟದ ಪ್ರಮಾಣವೆಂದು ಪರಿಗಣಿಸಿದರೂ 52 ಟಿಎಂಸಿ ನೀರು ಲಭ್ಯವಾಗಲಿದೆ. ಇದರಲ್ಲಿ 2 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಸುಮಾರು 50 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ರೈತ ಸಂಘ ಲೆಕ್ಕಾಚಾರ ಮುಂದಿಟ್ಟಿದೆ.

ನಿತ್ಯ 9,500 ಕ್ಯೂಸೆಕ್‌ನಂತೆ 56 ದಿನಗಳ ಕಾಲ ನೀರು ಹರಿಸಿದರೆ ಸುಮಾರು 5.32 ಲಕ್ಷ ಕ್ಯೂಸೆಕ್ ದಿನಗಳಷ್ಟು ನೀರು ಬೇಕಾಗುತ್ತದೆ.ಇದನ್ನು ಟಿಎಂಸಿ ಲೆಕ್ಕಕ್ಕೆ ಪರಿವರ್ತಿಸಿದರೆ ಸುಮಾರು 46 ಟಿಎಂಸಿ ನೀರು ಅಗತ್ಯವಾಗುತ್ತದೆ. ಹೀಗಾಗಿ ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಪ್ರಮಾಣ ಗಮನಿಸಿದರೆ ರೈತರ ಬೆಳೆಗಳಿಗೆ ಅಗತ್ಯವಿರುವಷ್ಟು ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ರಾಜ್ಯದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕಾಲುವೆಗಳಿಗೆ ನಿತ್ಯ ಒಟ್ಟು 9,500 ಕ್ಯೂಸೆಕ್ ನೀರು ಹರಿಸುವ ಕುರಿತು ಆ. 11ರಂದು ನಡೆದ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ನ. 30ರವರೆಗೆ ನಿತ್ಯ 9,500 ಕ್ಯೂಸೆಕ್ ನೀರು ಹರಿಸಲು ಅವಕಾಶವಿದೆ. ಜಲಾಶಯದ ನೀರಿನ ಲಭ್ಯತೆ ಪರಿಗಣಿಸಿದರೆ ಈ ತೀರ್ಮಾನದಂತೆ ನೀರು ಪೂರೈಸಲು ಸಾಧ್ಯವಿದೆ ಎಂದರು.

ಆದರೆ, ಡಿಸೆಂಬರ್ ತಿಂಗಳಲ್ಲಿ ಎಚ್‌ಎಲ್‌ಸಿ ಕಾಲುವೆಗೆ ಕೇವಲ ಒಂದು ಟಿಎಂಸಿ ನೀರು ಮಾತ್ರ ಬಿಡುವ ಸಾಧ್ಯತೆ ಕುರಿತು ಚರ್ಚೆಯಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈ ಭಾಗದಲ್ಲಿ ರೈತರು ಮೆಣಸಿನಕಾಯಿ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ಆಹಾರ ಬೆಳೆ ಬೆಳೆದಿದ್ದು, ಬೆಳೆಗಳು ನಿರ್ಣಾಯಕ ಹಂತದಲ್ಲಿರುವ ಸಂದರ್ಭದಲ್ಲಿ ಕಾಲುವೆ ನೀರು ಸ್ಥಗಿತಗೊಂಡರೆ ಭಾರಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಬಿತ್ತನೆ, ಬೀಜ, ಗೊಬ್ಬರ, ಔಷಧ, ಕೂಲಿ ಸೇರಿದಂತೆ ಕೃಷಿಗಾಗಿ ರೈತರು ಈಗಾಗಲೇ ಸಾವಿರಾರು ರೂಪಾಯಿ ಬಂಡವಾಳ ಹೂಡಿದ್ದಾರೆ. ಬೆಳೆ ಕೈಗೆ ಬರುವವರೆಗೂ ನೀರಿನ ಅಗತ್ಯವಿದ್ದು, ಮಧ್ಯದಲ್ಲಿಯೇ ನೀರು ಸ್ಥಗಿತಗೊಳಿಸಿದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಸಮರ್ಪಕ ನಿರ್ವಹಣೆ ಮಾಡುವ ಮೂಲಕ ರೈತರ ಬೆಳೆಗಳಿಗೆ ಆದ್ಯತೆಯ ಮೇಲೆ ನೀರು ಒದಗಿಸಬೇಕು. ರೈತರ ಹಿತದೃಷ್ಟಿಯಿಂದ ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಬೆಳೆಗಳು ಕೈಗೆ ಬರುವವರೆಗೆ ನೀರಿನ ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಶಾಸಕ ಬಿ. ನಾಗೇಂದ್ರ ಅವರನ್ನು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಣೆಯಾದ ಮಕ್ಕಳ ಪತ್ತೆಗೆ ಪೊಲೀಸ್ ಇಲಾಖೆ ಚುರುಕು
ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಿ: ಪ್ರವೀಣ ಕರಾಂಡೆ