ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳ

KannadaprabhaNewsNetwork |  
Published : May 25, 2025, 02:14 AM IST
24 ಎಚ್‌ಪಿಟಿ2- ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳ ಹರಿವು ಉತ್ತಮವಾಗಿದ್ದು, ಜಲಾಶಯದಲ್ಲಿ10.605 ಟಿಎಂಸಿ ನೀರು ಸಂಗ್ರಹವಾಗಿದೆ. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಜಲಾಶಯದಲ್ಲಿ ಈಗ 10.605 ಟಿಎಂಸಿ ನೀರು ಸಂಗ್ರಹವಾಗಿದೆ.

19ನೇ ಗೇಟ್‌ ಅಳವಡಿಕೆಗೆ ತಯಾರಿ/ ಜಲಾಶಯ ನೆಚ್ಚಿರುವ ರೈತರು ಸಂತಸಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಜಲಾಶಯದಲ್ಲಿ ಈಗ 10.605 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಬಾರಿಯೂ ಕೃಷಿಗೆ ಸಮಸ್ಯೆಯಾಗುವುದಿಲ್ಲ ಎಂಬ ಸಂತಸದಲ್ಲಿ ಜಲಾಶಯ ನೆಚ್ಚಿರುವ ರೈತರಿದ್ದಾರೆ. ತುಂಗಭದ್ರಾ ಜಲಾಶಯ ರಾಜ್ಯದ ವಿಜಯನಗರ, ಬಳ್ಳಾರಿ, ರಾಯಚೂರು‌ ಮತ್ತು ಕೊಪ್ಪಳ ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ 3 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಜೊತೆಗೆ ಕುಡಿಯುವ ನೀರಿಗೂ ಜಲಾಶಯವೇ ಆಸರೆಯಾಗಿದೆ. ಈ ಭಾಗದ ಕಾರ್ಖಾನೆಗಳಿಗೂ ನೀರು ಒದಗಿಸುತ್ತದೆ.

ಉತ್ತಮ‌ ಒಳ ಹರಿವು:

ಜಲಾಶಯದ ಒಳ‌ ಹರಿವು 3897 ಕ್ಯುಸೆಕ್ ನಷ್ಟಿದ್ದು, ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುವ ಲಕ್ಷಣ ಗೋಚರಿಸಿದ್ದು, ಒಳಹರಿವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷ 3.365 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ಹತ್ತು ವರ್ಷಗಳ ಸರಾಸರಿ ಹೋಲಿಕೆ ಮಾಡಿದರೆ 7.245 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು.

ಈ ಬಾರಿ ಜಲಾಶಯದಲ್ಲಿ 10.605 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಆರಂಭವಾಗುವ ಮುನ್ನವೇ ಜಲಾಶಯದ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಜಲಾಶಯ ನೆಚ್ಚಿರುವ ರೈತರು ಕೂಡ ಖುಷಿಯಾಗಿದ್ದಾರೆ.

19ನೇ ಗೇಟ್‌ ನಿರ್ಮಾಣಕ್ಕೆ ತಯಾರಿ:

2024ರ ಆ. 10ರಂದು ಕಿತ್ತುಕೊಂಡು ಹೋಗಿದ್ದ 19ನೇ ಗೇಟ್‌ಗೆ ಈಗ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿದ್ದು, ಈ ಸ್ಟಾಪ್‌ ಲಾಗ್ ತೆಗೆದು ಕ್ರಸ್ಟ್‌ ಗೇಟ್‌ ನಿರ್ಮಾಣಕ್ಕೆ ಗುಜರಾತ್‌ ಮೂಲದ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಪ್ರಾಥಮಿಕ ತಯಾರಿ ನಡೆಸಿದೆ. ಈ ಕಂಪನಿ ಈಗ ಟಾಟಾ ಸ್ಟೀಲ್ಸ್‌, ಜಿಂದಾಲ್‌ ಮತ್ತು ವೈಜಾಗ್‌ ಸ್ಟೀಲ್ಸ್‌ಗಳಲ್ಲಿ ಮೆಟಿರಿಯಲ್‌ ಖರೀದಿ ಮಾಡುತ್ತಿದ್ದು, ಟೆಂಡರ್‌ ನಿಯಮಾನುಸಾರ ಗುಣಮಟ್ಟದ ಮೆಟಿರಿಯಲ್‌ ಖರೀದಿ ಮಾಡುತ್ತಿದೆ. ವರ್ಕ್‌ ಶಾಪ್‌ಯೊಂದರಲ್ಲಿ ಗೇಟ್‌ ತಯಾರಿಸಿ ಅಂತಿಮ ಹಂತದ ಕಾರ್ಯವನ್ನು ಜಲಾಶಯದ ಬಳಿ ಮಾಡಿ; 19ನೇ ಗೇಟ್‌ಅನ್ನು ಸ್ಥಾಪಿಸಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಇನ್ನೂ 32 ಗೇಟ್‌ಗಳಿಗೆ ಮರು ಟೆಂಡರ್‌ ಕರೆಯಲಾಗಿದ್ದು, ಮೇ 28ರಂದು ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿದೆ. ಆ ಬಳಿಕ ಟೆಕ್ನಿಕಲ್‌ ಬಿಡ್‌ ಓಪನ್‌ ಆಗಲಿದೆ. ಬಳಿಕವೇ ಯಾವ ಕಂಪನಿಗೆ ಟೆಂಡರ್‌ ಆಗಿದೆ ಎಂಬುದು ತಿಳಿಯಲಿದೆ. ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸಿದರೆ ಮಾತ್ರ ಜಲಾಶಯ ಸಂಪೂರ್ಣ ಭರ್ತಿಗೆ ಅನುಕೂಲ ಆಗಲಿದೆ. ಇಲ್ಲದಿದ್ದರೆ ಜಲಾಶಯ ಸಂಪೂರ್ಣ ಭರ್ತಿ ಆಗುವುದು ಕೂಡ ಅನುಮಾನ ಎಂಬುದು ಈಗ ನೀರಾವರಿ ಹಾಗೂ ತುಂಗಭದ್ರಾ ಮಂಡಳಿ ಅಧಿಕಾರಿಗಳ ವಲಯದಲ್ಲೇ ಚರ್ಚೆಯಾಗುತ್ತಿದೆ. ರೈತರು ಕೂಡ ಈ ವರ್ಷ ಎರಡನೆ ಬೆಳೆಗೆ ನೀರು ಸಿಗಲಿದೆಯೇ? ಇಲ್ಲವೇ ಎಂಬ ಅನುಮಾನದಲ್ಲೇ ಇದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ