ಸೋಮರಡ್ಡಿ ಅಳವಂಡಿ
ಮೂರು ರಾಜ್ಯಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಶಿಥಿಲಗೊಂಡಿದ್ದ 33 ಕ್ರಸ್ಟ್ ಗೇಟ್ ಬದಲಾಯಿಸಿ, ನೂತನ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಜೂನ್‌ನಲ್ಲಿಯೇ ಮಳೆ ಬಂದರೂ ನೀರು ಸಂಗ್ರಹಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಾಗಿ, ತುಂಗಭದ್ರಾ ಜಲಾಶಯ ಈಗ ಸುಭದ್ರ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ನಿರ್ಮಾಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಕ್ರಸ್ಟ್ ಗೇಟ್ ಮುರಿದು ಎದುರಾದ ಸಮಸ್ಯೆ ಎದುರಿಸಿದ ಸಮಸ್ಯೆ, ಗೇಟ್ ಬದಲಾವಣೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.2024ರ ಆ.10ರಂದು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮಧ್ಯ ರಾತ್ರಿ ಕಿತ್ತು ಹೋದ ಸುದ್ದಿ ಕೇಳಿ ಬರಸಿಡಿಲು ಬಡಿದಂತೆ ಆಗಿತ್ತು. ಅಂದು ರಾತ್ರೋರಾತ್ರಿ ಜಲಾಶಯಕ್ಕೆ ಬಂದು ಡ್ಯಾಮ್ ಮೇಲೆ ನಿಂತಾಗ ನನ್ನ ಕೈಕಾಲುಗಳು ನಡುಗುತ್ತಿದ್ದವು. ಮಧ್ಯರಾತ್ರಿ 1 ಗಂಟೆಗೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದೆವು. ಬೆಳಗಿನ ಜಾವ 4 ಗಂಟೆಯ ವೇಳೆಗೆ ಜಲಾಶಯಗಳ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಸಂಪರ್ಕಿಸಿ, ಇದ್ದ ವಿಷಯ ವಿವರಿಸಿದ್ದೆವು. ಮಾರನೇ ದಿನ ಬೆಳಗ್ಗೆಯೇ ಅವರು ಸಹ ಆಗಮಿಸಿ, ಏನು ಮಾಡಬೇಕು ಎಂದು ಹತ್ತಾರು ಎಂಜನಿಯರ್ ಜತೆ ಚರ್ಚೆ ಮಾಡಿ, ನೀರು ನಿಲ್ಲಿಸುವ ಪ್ರಯತ್ನ ಮಾಡಿದೆವು. ರೈತರ ಬೆಳೆ ಕಾಪಾಡಿಕೊಳ್ಳವುದು ಮತ್ತು ಜಲಾಶಯ ಸುರಕ್ಷಿಕವಾಗಿ ಕಾಪಾಡುವುದು ನಮಗೆ ದೊಡ್ಡ ಸವಾಲಾಗಿತ್ತು. ಅದೃಷ್ಟವಶಾತ್ ಜಲಾಶಯದ ಮುರಿದು ನದಿಯಲ್ಲಿ ಕೊಚ್ಚಿ ಹೋಗಿದ್ದ 19ನೇ ಕ್ರಸ್ಟ್ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಸುವಲ್ಲಿ ಯಶಸ್ವಿಯಾದೆವು. ನೀರನ್ನೂ ಉಳಿಸಲು, ಸಂಗ್ರಹಿಸಲು ಸಾಧ್ಯವಾಯಿತು. ರೈತರ ಬೆಳೆಯೂ ಬಂದಿತು.
ಆದರೆ, ಅದೃಷ್ಟವಶಾತ್ ನಾವು ಅಂದುಕೊಂಡಿದ್ದಕ್ಕಿಂತ ಬೇಗನೇ 33 ಕ್ರಸ್ಟ್ ಗೇಟ್ ಬದಲಾಯಿಸುವ ಕಾರ್ಯ ಪೂರ್ಣಗೊಳಿಸಿದ್ದಾರೆ. ಜೂನ್ ವೇಳೆಗೆ ಅಂದಿದ್ದು, ಏಪ್ರಿಲ್ ಅಂತ್ಯಕ್ಕೆ ಶೇ.90 ರಷ್ಟು ಕಾಮಗಾರಿ ಮುಗಿದಿದೆ. ಈಗ ಜೂನ್ ತಿಂಗಳಲ್ಲಿಯೇ ಮಳೆ ಬಂದರೂ ನೀರು ಸಂಗ್ರಹಿಸುವುಕ್ಕೆ ಯಾವುದೇ ಸಮಸ್ಯೆ ಇಲ್ಲ.
ವಿರೋಧ ಪಕ್ಷದವರಿಗೆ ಕೆಲಸವೇ ಉತ್ತರ ಎನ್ನುವಂತೆ ನೀಡಿದ್ದೇವೆ. ಕ್ರಸ್ಟ್ ಗೇಟ್ ಮುರಿದು ಕೊಚ್ಚಿ ಹೋದಾಗಲೂ ಬಾಯಿಗೆ ಬಂದಂತೆ ಮಾತನಾಡಿದ್ದರು. ಅದನ್ನು ಸರಿ ಮಾಡಿಸಿ, ಎರಡು ಬೆಳೆಗೆ ನೀರು ನೀಡಿದ್ದೇವೆ. ಈಗ 33 ಕ್ರಸ್ಟ್ ಗೇಟ್ ಕೇವಲ ನಾಲ್ಕೇ ತಿಂಗಳಲ್ಲಿ ಪೂರ್ಣಗೊಳಿಸಿ, ಜೂನ್ ವೇಳೆಗೆ ನೀರು ಸಂಗ್ರಹಿಸುವಂತೆ ಮಾಡಿದ್ದೇವೆ. ವಿರೋಧ ಪಕ್ಷದವರಿಗೆ ನಾವು ಮತ್ತು ನಮ್ಮ ಸರ್ಕಾರ ಕೆಲಸ ಮಾಡುವ ಮೂಲಕ ಉತ್ತರ ನೀಡಿದ್ದೇವೆ ಎಂದಿದ್ದಾರೆ.