ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಹಣ್ಣು ಸೇಬುವನ್ನು ಕೇವಲ ಕಾಶ್ಮೀರದಂತಹ ತಂಪು ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಅದನ್ನು ಬಿಟ್ಟು ಬಿಸಿಲು ನಾಡಿನಲ್ಲಿ ಸೇಬು ಬೆಳೆಯುವುದು ಅಸಾಧ್ಯ ಎನ್ನುವಂತಿತ್ತು. ಆದರೆ, ರೈತನೊಬ್ಬ ಸ್ಥಳೀಯವಾಗಿ ಬೆಳೆಯುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾನೆ.
ಸಿದ್ದಯ್ಯ ಹಿರೇಮಠ
ಕಾಗವಾಡ : ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಹಣ್ಣು ಸೇಬುವನ್ನು ಕೇವಲ ಕಾಶ್ಮೀರದಂತಹ ತಂಪು ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಅದನ್ನು ಬಿಟ್ಟು ಬಿಸಿಲು ನಾಡಿನಲ್ಲಿ ಸೇಬು ಬೆಳೆಯುವುದು ಅಸಾಧ್ಯ ಎನ್ನುವಂತಿತ್ತು. ಆದರೆ, ರೈತನೊಬ್ಬ ಸ್ಥಳೀಯವಾಗಿ ಬೆಳೆಯುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕುಗಳು ರಾಜ್ಯದಲ್ಲೇ ಅತಿ ಕಡಿಮೆ ಮಳೆಯಾಗುವ ಪ್ರದೇಶಗಳು. 45 ಡಿಗ್ರಿ ತಾಪಮಾನದಲ್ಲೂ ಇಲ್ಲಿ ಕಾಶ್ಮೀರಿ ಆಪಲ್ ಬೆಳೆಯುವುದು ಅಸಾಧ್ಯವೆಂದೇ ಭಾವಿಸಲಾಗುತ್ತಿತ್ತು. ಆದರೆ, ಈ ಮಾತನ್ನು ರೈತ ಸಾಧ್ಯವನ್ನಾಗಿ ಮಾಡಿ ತೋರಿಸಿದ್ದಾನೆ.
ನೀರಿನ ಕೊರತೆಯಿಂದ ಬಳಲುತ್ತಿದ್ದ ಬಂಜರು ಭೂಮಿ
ನೀರಿನ ಕೊರತೆಯಿಂದ ಬಳಲುತ್ತಿದ್ದ ಬಂಜರು ಭೂಮಿಯಲ್ಲಿ, ಸಿಕ್ಕ ಅಲ್ಪ ನೀರನ್ನೇ ಬಳಸಿಕೊಂಡು ಸೇಬು ಹಣ್ಣು ಬೆಳೆದು ಯಶಸ್ಸು ಕಂಡಿದ್ದಾರೆ ಮಾಜಿ ಸೈನಿಕರೂ ಆಗಿರುವ ರಾಮಪ್ಪ ಸಿದ್ದಪ್ಪ ಗಡದ. ಕಾಗವಾಡ ಮತಕ್ಷೇತ್ರದ ಬೆವಣೂರು ಗ್ರಾಮದ ರಾಮಪ್ಪ ಗಡದ 17 ವರ್ಷ ದೇಶ ಸೇವೆ ಸಲ್ಲಿಸಿದ ನಂತರ ತಾಯ್ನಾಡಿಗೆ ಮರಳಿ ಕೃಷಿಯಲ್ಲಿ ತೊಡಗಿದ್ದಾರೆ.
ತಮ್ಮ ಪತ್ನಿ ಸ್ನೇಹಲತಾ ಅವರ ಸಹಕಾರದೊಂದಿಗೆ ಹೊಸ ಪ್ರಯೋಗಕ್ಕೆ ಕೈಹಾಕಿದರು. ಅವರ ದುಡಿಮೆ ಮತ್ತು ಹಠದ ಫಲವಾಗಿ ಇಂದು ಒಣಗಿದ ಭೂಮಿ ಇಂದು ಸೇಬು ಹಣ್ಣುಗಳಿಂದ ಕಂಗೊಳಿಸುತ್ತಿದೆ.
ಕೆಲವರು ಅಪಹಾಸ್ಯ ಮಾಡಿದ್ದರು
ಮೂರು ವರ್ಷಗಳ ಹಿಂದೆ 1 ಎಕರೆ ಭೂಮಿಯಲ್ಲಿ ಅಣ್ಣಾ ತಳಿಯ 400 ಆಪಲ್ ಸಸಿಗಳನ್ನು ಪ್ರತಿ ಒಂದು ಸಸಿ ₹120 ದರದಲ್ಲಿ ಖರೀದಿಸಿ ಪ್ರತಿ ಸಾಲಿನಿಂದ ಸಾಲಿಗೆ 12 ಹಾಗೂ ಸಸಿಯಿಂದ ಸಸಿಗೆ 8 ಅಡಿ ಅಂತರದಲ್ಲಿ ನಾಟಿ ಮಾಡಿದ್ದರು. ಇಂತಹ ಬಿಸಿಲಿನಲ್ಲಿ ಸೇಬು ಸಸಿ ನೆಟ್ಟ ರೈತನ ಈ ಪ್ರಯತ್ನವನ್ನು ನೋಡಿದ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಕ್ಯಾರೆ ಅನ್ನದ ಇವರು, ಹಿಂದಿರುಗಿ ನೋಡುವ ಸ್ವಭಾವ ಇವರದ್ದಲ್ಲ. ಬೋರ್‌ವೆಲ್, ಬಾವಿ ಹಾಗೂ ಕೃಷಿ ಹೊಂಡಗಳ ಮೂಲಕ ನೀರನ್ನು ಸಂಗ್ರಹಿಸಿ, ಅಲ್ಪ ನೀರಿನಲ್ಲೇ ಆಪಲ್ ಬೆಳೆ ಬೆಳೆಸಿ ಇಂದು ಗದ್ದೆ ತುಂಬ ಹಣ್ಣುಗಳನ್ನು ಕಾಣುತ್ತಿದ್ದಾರೆ.
ಈಗಾಗಲೇ ಪ್ರತಿ ಟನ್ ₹1.50 ಲಕ್ಷ ದರದಂತೆ ಸ್ಥಳೀಯ ಮಾರುಕಟ್ಟೆಗೆ ರವಾನಿಸುತ್ತಿದ್ದಾರೆ. ವಾರ್ಷಿಕ 4 ರಿಂದ 5 ಐದು ಟನ್ ಸೇಬು ಹಣ್ಣು ಸಿಗುವ ನಿರೀಕ್ಷೆ ಹೊಂದಿದ್ದಾರೆ. ಕಬ್ಬು, ಇತರೆ ಬೆಳೆಗಳಿಗಿಂತ ಅಲ್ಪ ನೀರಿನಲ್ಲಿ ಒಂದು ಎಕರೆ ಸೇಬು ಹಣ್ಣಿನಿಂದ ವಾರ್ಷಿಕ ₹ 4 ರಿಂದ 5 ಲಕ್ಷ ಆದಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ ರಾಮಪ್ಪ. ಸಾವಯವ ಕೃಷಿ ಮೂಲ ಆಧಾರವಾಗಿಟ್ಟುಕೊಂಡ ರೈತ ರಾಮಪ್ಪ ಗೋ ಮೂತ್ರ, ಕೊಟ್ಟಿಗೆ ಗೊಬ್ಬರ, ಜೇನು ನೊಣಗಳ ಅಭಿವೃದ್ಧಿ, ಜೀವಾಮೃತ ಹಾಗೂ ಅಲ್ಪಮಟ್ಟಿಗೆ ಫರ್ಟಿಲೈಸರ್ ಬಳಸುವುದರಿಂದ ರೋಗ ಕಡಿಮೆ ಅಂತಾರೆ ಇವರು.ನೀರಿನ ಅಭಾವವಿದ್ದ ಕಾರಣ ಪ್ರತಿ ದಿನ 5 ಎಚ್‌ಪಿ ವಾಟರ್ ಪಂಪ್‌ಸೆಟ್ ಮೂಲಕ ಒಂದು ಎಕರೆ ದಾಳಿಂಬೆ ಹಾಗೂ ಆಪಲ್ ಸೇರಿಸಿ ಒಂದು ಗಂಟೆ ಹನಿ ನೀರಾವರಿ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಈ ಸಾಧನೆ ಇತರ ರೈತರಿಗೆ ಮಾದರಿಯಾಗಿದ್ದು, ಸಂಕಲ್ಪ ಮತ್ತು ಶ್ರಮ ಇದ್ದರೆ ಬಂಜರು ಭೂಮಿಯಲ್ಲೂ ಯಶಸ್ಸು ಸಾಧನೆ ಮಾಡಬಹುದು ಎಂಬುದನ್ನು ರಾಮಪ್ಪ ಗಡದ ಸಾಬೀತು ಮಾಡಿದ್ದಾರೆ.
ಮೂರು ವರ್ಷಗಳ ಹಿಂದೆ 1 ಎಕರೆ ಭೂಮಿಯಲ್ಲಿ 400 ಸೇಬು ಗಿಡಗಳನ್ನು ನಾಟಿ ಮಾಡಿದ್ದೆ. ಅವು ಈಗ ಫಸಲು ನೀಡುತ್ತಿವೆ. ಮೊದಮೊದಲು ಎಲ್ಲರೂ ಇಂತಹ ಭೂಮಿಯಲ್ಲಿ ಆಪಲ್ ಎಲ್ಲಿ ಬೆಳೆಯಬೇಕು ಎಂದು ಎಲ್ಲರೂ ನಗಾಡಿದ್ದರು. ಆದರೆ, ಈಗ ಅಲ್ಪ ಪ್ರಮಾಣದ ನೀರನಲ್ಲಿಯೇ ಸೇಬು ಬೆಳೆದಿದ್ದೇನೆ. ಶ್ರಮ ಪಟ್ಟರೆ ಯಾವುದು ಅಸಾಧ್ಯವಲ್ಲ. ನಾವು ಪ್ರಯತ್ನ ಮಾಡಬೇಕಷ್ಟೇ.
- ರಾಮಪ್ಪ ಗಡದ, ಸೇಬು ಬೆಳೆದ ರೈತ