ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ವಿಜಯಪುರ ಜಿಲ್ಲೆಯನ್ನು ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಯಲ್ಲಿ ಇಡೀ ದೇಶಕ್ಕೆ ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.ಪಟ್ಟಣದ ಮೆಲ್ದರ್ಜೆಗೇರಿಸಿದ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಟ್ಟಣ ಪಂಚಾಯತಿ ನೂತನ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ನೂತನವಾಗಿ ಸುಮಾರು ₹3 ಕೋಟಿ ವೆಚ್ಚದ ಪಟ್ಟಣ ಪಂಚಾಯತಿ ಹಾಗೂ ₹8.30 ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬರುವಂತ ದಿನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡುವ ಮೂಲಕ, ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮಾದರಿಯ ಕೆಲಸ ಮಾಡಲಾಗಿದೆ. ಗ್ಯಾರಂಟಿ ಜೊತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆಲಮಟ್ಟಿ ಅಣೆಕಟ್ಟೆಯ ನೀರನ್ನು 524 ಗೆಜೆಟ್ ನೋಟಿಫಿಕೇಶನ್‌ಗೆ ಬೇಕಾದ ತಯಾರಿಯನ್ನು ರಾಜ್ಯ ಸರ್ಕಾರ ಮಾಡಿಕೊಂಡಿದ್ದು, ಸುಮಾರು 1 ಸಾವಿರ ಕಿ.ಮೀ ವಿಜಯಪುರ ಮುಖ್ಯ ಕಾಲುವೆಯಲ್ಲಿ 200 ಕಿ.ಮೀ ಉದ್ದದ ಕಾಲುವೆಯ 4 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವ ಮೂಲಕ ಕೆರೆ, ಹಳ್ಳಗಳು ಭರ್ತಿ ಮಾಡಿ, 1 ಸಾವಿರ ಮೀಟರ್‌ಗೆ ಒಂದರಂತೆ ಹಂತ, ಹಂತವಾಗಿ ಬಾಂದರ್ ನಿರ್ಮಾಣ ಮಾಡಿ ಸುಮಾರು 178 ಹಳ್ಳಿಗಳ ರೈತರ ಹೊಲಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಭವಣೆ ನೀಗಿಸುವ ಮೂಲಕ ಭಾರತ ದೇಶದಲ್ಲಿ ಸಂಪತ್ಭರಿತ ನೀರಿನ ಅಂತರ್ಜಲ ಹೆಚ್ಚಿಸುವ ಮೂಲಕ ರಾಷ್ಟ್ರಕ್ಕೆ ಮಾದರಿಯ ಇದರಿಂದ ಸದಾಕಾಲ ನೀರಿನಿಂದ ಕಂಗೊಳಿಸುವಂತೆ ಮಾಡಿ ಅಂತರ್ಜಲದ ಹೊಳೆಯನ್ನೇ ಹರಿಸಲಾಗುವುದು. ಈ ಅಭಿವೃದ್ಧಿ ಕಾರ್ಯಗಳು ಒಂದು ಪ್ರಾಯೋಗಿಕ ಯೋಜನೆಯಾಗಿದ್ದು, ಇದು ಯಶಸ್ವಿಯಾದಲ್ಲಿ ಇಡೀ ರಾಷ್ಟ್ರಕ್ಕೆ ವಿಜಯಪುರ ಜಿಲ್ಲೆಯು ನೀರಾವರಿ ನಿರ್ವಹಣೆಯಲ್ಲಿ ಹೊಸ ದಿಕ್ಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿಪರ ಚಿಂತನೆಯುಳ್ಳ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಸಿಕ್ಕಿರುವುದು ಪುಣ್ಯ. ಬೂದಿಹಾಳ ಪಿರಾಪುರ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸಂಪತ್ ಗುಣಾರಿ ಹಾಗೂ ಜಿಲ್ಲಾ ಪಿಡಿಡಿಸಿ ಬಿ.ಎ.ಸೌದಾಗರ ಮಾತನಾಡಿ, ಇಲಾಖೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ನೀಡಲು ಸಚಿವರಲ್ಲಿ ಮನವಿ ಮಾಡಿದರು.
ಯಶಸ್ವಿ ಯೋಜನೆ ಅಡಿ 5 ಜನರಿಗೆ ಸಾಂಕೇತಿಕವಾಗಿ ಕನ್ನಡಕ ವಿತರಣೆ, ವಿವಿಧ ಸಂಘಟನೆಗಳಿಂದ ಮನವಿ ಹಾಗೂ ಕಾನಿಪ ತಾಲೂಕು ಘಟಕದಿಂದ ನಿವೇಶನ ಸಹಿತ ಅನುದಾನ ನೀಡಲು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಉಪಾಧ್ಯಕ್ಷ ರಮೇಶ ಮಸಿಬಿನಾಳ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ, ಅಭಿಯಂತರರಾದ ಪ್ರಶಾಂತ ವಲ್ಲಾಪೂರ, ಮಹೇಶ ಜಾದವ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.