ಕನ್ನಡಪ್ರಭ ವಾರ್ತೆ ಕೊಪ್ಪಳ
ತುಂಗಭದ್ರಾ ಜಲಾಶಯ ಇತಿಹಾಸದಲ್ಲಿಯೇ ದೊಡ್ಡ ದುರಂತವಾಗಿದ್ದು, ಇದನ್ನು ಕೇಳಿದ ನಮಗೆ ನಿಜಕ್ಕೂ ಶಾಕ್ ಆಗಿತ್ತು, ಆದಷ್ಟು ಬೇಗನೆ ದುರಸ್ತಿಯಾಗಬೇಕಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತಡರಾತ್ರಿ ಮಾಹಿತಿ ದೊರೆಯುತ್ತಿದ್ದಂತೆ ಅಷ್ಟೊತ್ತಿನಲ್ಲಿಯೇ ಆಗಮಿಸಿದ್ದೇನೆ, ಇಡೀ ರಾತ್ರಿ ಇಲ್ಲಿಯೇ ಇದ್ದು, ಪರಿಹಾರ ಏನು ಎನ್ನುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ, ಇಂಥ ದುರಂತ ಕನಸಿನಲ್ಲಿಯೂ ಊಹೆ ಮಾಡಿರಲಿಲ್ಲ. ಈಗೇನಿದ್ದರೂ ಮೊದಲು ದುರಸ್ತಿ ಕಾರ್ಯ ಆಗಬೇಕಾಗಿದೆ ಎಂದರು.
ತಡರಾತ್ರಿ ಜಲಾಶಯಕ್ಕೆ ಬಂದು, ಕ್ರಸ್ಟ್ ಗೇಟ್ ಮುರಿದು, ನೀರು ಹೋಗುತ್ತಿರುವುದನ್ನು ನೋಡಿ ಭಯವಾಗಿತ್ತು. ಇನ್ನೇನು ಏನೋ ಆಗಿಯೇ ಬಿಡುತ್ತದೆ ಎನ್ನುವಂತೆ ಜಲಾಶಯದಲ್ಲಿ ನಡುಗುತ್ತಿತ್ತು, ನಾವು ನಿಂತಿರುವ ನೆಲವೇ ಅದುರುತ್ತಿತ್ತು, ಆದರೂ ಅಧಿಕಾರಿಗಳು ತಜ್ಞರೊಂದಿಗೆ ಚರ್ಚೆ ಮಾಡಿ, ಕ್ರಸ್ಟ್ ಗೇಟ್ ಒಂದಕ್ಕೆ ನೀರು ಹೋಗುತ್ತಿದ್ದರಿಂದ ಹೀಗಾಗುತ್ತದೆ, ಉಳಿದ ಕ್ರಸ್ಟ್ ಗೇಟ್ ತೆಗೆದು ನೀರು ಬಿಡುವಂತೆ ಸಲಹೆ ಬಂದಿದ್ದರಿಂದ ಅದನ್ನು ಅಧಿಕಾರಿಗಳು ಕಾರ್ಯಗತ ಮಾಡಿದ ಮೇಲೆ ಸಮಸ್ಯೆ ಒಂಚೂರು ಕಡಿಮೆಯಾಯಿತು. ಆದರೂ ಆತಂಕ ಇದ್ದೇ ಇತ್ತು.ಈಗ ಒಂದು ಬೆಳೆಯನ್ನಾದರೂ ಉಳಿಸಿಕೊಳ್ಳಬೇಕು ಎನ್ನುವುದೇ ನಮ್ಮ ಸವಾಲಾಗಿದ್ದು, ಆ ದಿಸೆಯಲ್ಲಿ ಅಧಿಕಾರಿಗಳು ಕಾರ್ಯಗತವಾಗಿದ್ದಾರೆ ಎಂದರು.ಅಧಿಕಾರಿಗಳ ಬೇಜವಾಬ್ದಾರಿಯಿಂದ ಗೇಟು ಕಿತ್ತು ಹೋಗಿದೆ- ಸಂಸದ ಜಗದೀಶ್ ಶೆಟ್ಟರ್:ತುಂಗಭದ್ರಾ ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜಲಾಶಯದ ಗೇಟ್ ಕಿತ್ತು ಹೋಗಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.
ಪ್ರಸಕ್ತ ಸಾಲಿನಲ್ಲಿ ಎರಡು ಬೆಳೆಗೆ ನೀರು ದೊರೆಯುತ್ತದೆ ಎಂದು ಆಸೆಯಿಂದ ಇದ್ದ ರೈತರಿಗೆ ಇದು ಅತ್ಯಂತ ನೋವಿನ ವಿಷಯವಾಗಿದೆ. ತುಂಗಭದ್ರಾ ಮಂಡಳಿ ಅಧಿಕಾರಿಗಳು ರೈತರ ಆಸೆಯ ಮೇಲೆ ತಣ್ಣೀರು ಎರಚಿದ್ದಾರೆ. ಈಗಾಗಲೇ ಅಚ್ಚುಕಟ್ಟು ಪ್ರದೇಶದ ರೈತರು ಜಲಾಶಯದ ಗೇಟ್‌ನ ವಿಷಯ ತಿಳಿದು ತಕ್ಷಣ ಕಣ್ಣೀರು ಹಾಕಲು ಪ್ರಾರಂಭಿಸಿದ್ದಾರೆ.ಜವಾಬ್ದಾರಿಯಿಂದ ವರ್ತಿಸಬೇಕಾದ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಇಂದು ಈ ಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಗಳ ಮೇಲೆ ಕಿಡಿ ಕಾರಿದರು.ಈ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಂಸದ ಶಿವರಾಮಗೌಡ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಸಿದ್ದರಾಮ ಸ್ವಾಮಿ ಹಾಗೂ ರೈತ ಮುಖಂಡ ಪುರುಷೋತ್ತಮ ಗೌಡ ಇತರರಿದ್ದರು.