28ಕ್ಕೆ ಗುಡ್ಡಾಪುರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ

KannadaprabhaNewsNetwork |  
Published : Aug 12, 2024, 01:01 AM IST
ಆ.28 ರಂದು ಗುಡ್ಡಾಪುರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಪೂರ್ವಭಾವಿ ಸಭೆ | Kannada Prabha

ಸಾರಾಂಶ

ಕರ್ನಾಟಕ ಸುವರ್ಣ-ಸಂಭ್ರಮ-50ರ ಕಾರ್ಯಕ್ರಮವನ್ನು ಅದ್ಧೂರಿ ಆಚರಣೆಯೊಂದಿಗೆ ವೈಶಿಷ್ಟಪೂರ್ಣವಾಗಿ ಆಯೋಜನೆ ಮಾಡಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ಸುವರ್ಣ-ಸಂಭ್ರಮ-50ರ ಕಾರ್ಯಕ್ರಮವನ್ನು ಅದ್ಧೂರಿ ಆಚರಣೆಯೊಂದಿಗೆ ವೈಶಿಷ್ಟಪೂರ್ಣವಾಗಿ ಆಯೋಜನೆ ಮಾಡಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50ರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹೊರನಾಡಿನಲ್ಲಿ ಆಯೋಜಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ವಿಜಯಪುರ ಸೇರಿದಂತೆ ರಾಯಚೂರು, ಮಂಗಳೂರು, ಮೈಸೂರು 4 ಗಡಿ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮ ಬೆಳಗಾವಿ ವಿಭಾಗದ ಪ್ರಥಮ ಕಾರ್ಯಕ್ರಮವಾಗಿದೆ. ಮಹಾರಾಷ್ಟದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಆ.28 ರಂದು ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.ಕರ್ನಾಟಕದ ಹಿರಿಯ ಚೇತನಗಳಾದ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈ, ಡಾ.ಚನ್ನಬಸವ ಪಟ್ಟದೇವರು, ಡಾ.ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈಗಾಗಲೇ ದಾನಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯ ದೇವಸ್ಥಾನ ಟ್ರಸ್ಟ್‌ನ ಸದಸ್ಯರೊಂದಿಗೆ ಸಭೆ ನಡೆಸಿ ಸಹಕಾರ ಕೋರಲಾಗಿದೆ. ದೇವಸ್ಥಾನ ಜತ್ತ ತಾಲೂಕಿನಲ್ಲಿರುವುದರಿಂದ ಸಾಂಗ್ಲಿಯ ಜಿಲ್ಲಾಡಳಿದ ಸಹಕಾರ ಕೋರಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸ್ವಾಗತ, ಮೆರವಣಿಗೆ, ವೇದಿಕೆ ನಿರ್ಮಾಣ, ಸಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ, ಸಾರಿಗೆ, ವಸತಿ, ಪ್ರಚಾರ, ಆರೋಗ್ಯ, ಸ್ವಚ್ಛತೆ, ಭದ್ರತೆ ಹಾಗೂ ಊಟೋಪಚಾರ ಸಮಿತಿಗಳನ್ನು ರಚಿಸಲಾಗುವುದು. ಇವುಗಳ ಉಸ್ತುವಾರಿಗೆ ರಾಜ್ಯ ಮಟ್ಟದ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿರುವುದರಿಂದ ಸುಸಜ್ಜಿತ ಶಾಮಿಯಾನ್‌, ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತಿದೆ. ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲು ಜಿಲ್ಲಾಡಳಿತ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.ಸಭೆಯಲ್ಲಿ ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಸದಸ್ಯರಾದ ಸಂಜೀವಕುಮಾರ ಅತಿವಾಳೆ, ಅಶೋಕ ಚಂದರಗಿ, ಡಾ.ಎಂ.ಎಸ್.ಮಧಬಾವಿ, ಭರತ್‌ರಾಜ್, ಶಿವರೆಡ್ಡಿ ಖೇಡದ, ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಬೋವಿ, ದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್‌ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ನಿರ್ದೇಶಕ ಪ್ರಕಾಶ ಗಣಿ ಹಾಗೂ ವಿವಿಧ ತಾಲೂಕಿನ ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಎಲ್ಲ ಚುನಾಯಿತ ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಂದು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಇದರೊಂದಿಗೆ ಗಡಿಭಾಗದ ಸಮಸ್ಯೆಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.

-ಸೋಮಣ್ಣ ಬೇವಿನಮರದ,
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್