ಕೃಷ್ಣ ಲಮಾಣಿ
ಹೊಸಪೇಟೆ: ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ನಿರ್ಮಾಣ ಕಾರ್ಯ ಈಗ ಭರದಿಂದ ಸಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ತಗ್ಗಿದ ಕೂಡಲೇ ನೂತನ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ. ಜಲಾಶಯದ ಕ್ರಸ್ಟ್ ಗೇಟ್ ನಿರ್ಮಾಣದ ಹೊಣೆಯನ್ನು ಗುಜರಾತ್ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ ವಹಿಸಿಕೊಂಡಿದೆ.ಈಗಾಗಲೇ ಗದಗ, ಟಿಬಿಡ್ಯಾಂನಲ್ಲಿ ಗೇಟ್‌ಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕ್ರಸ್ಟ್‌ಗೇಟ್‌ಗಳ ನಿರ್ಮಾಣ ಸ್ಥಳಕ್ಕೆ ತುಂಗಭದ್ರಾ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ನೀರಾವರಿ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
40 ಟಿಎಂಸಿ ನೀರಿದ್ದಾಗ ಅಳವಡಿಕೆ:ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆಗಸ್ಟ್‌ನಲ್ಲಿ ಕಳಚಿ ಬಿದ್ದಿತ್ತು. ಈ ಗೇಟ್ ಬಿದ್ದ ಬಳಿಕ ಪರಿಣಿತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಸಲಾಗಿತ್ತು. ಈಗ ಹೊಸ ಗೇಟ್ ನಿರ್ಮಾಣಗೊಂಡಿದ್ದು, ಜಲಾಶಯದ ಬಳಿ ಇಳಿಸಲಾಗಿದೆ. ಆದರೆ, ಅದನ್ನು ಅಳವಡಿಕೆಗೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಅಡ್ಡಿಯಾಗಿದೆ.
ಜಲಾಶಯದ ಒಳಹರಿವು ತಗ್ಗಿದೆ. ಜಲಾಶಯದಲ್ಲಿ ಸಂಗ್ರಹವಾದ ನೀರು ಕಡಿಮೆ ಆದ ಬಳಿಕ ಗೇಟ್ ಅಳವಡಿಸಲಾಗುತ್ತದೆ. ಈಗ ಡ್ಯಾಂನಲ್ಲಿ 80.003 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 40 ಟಿಎಂಸಿ ನೀರು ಇದ್ದರೆ ಮಾತ್ರ ಗೇಟ್ ಅಳವಡಿಕೆ ಸಾಧ್ಯ. ಇನ್ನು 40 ಟಿಎಂಸಿ ನೀರು ಖಾಲಿಯಾದ ಬಳಿಕ ಹಳೇ ಕ್ರಸ್ಟ್ ಗೇಟ್ ತೆರವುಗೊಳಿಸಿ; ಹೊಸ ಗೇಟ್ ಅಳವಡಿಸಲಾಗುತ್ತದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ಗದಗ, ಟಿಬಿಡ್ಯಾಂನಲ್ಲಿ ನಿರ್ಮಾಣ:
ಜಲಾಶಯದ 19ನೇ ಕ್ರಸ್ಟ್ ಗೇಟ್ ಮತ್ತು ಇನ್ನುಳಿದ 7 ಸೆರಿದಂತೆ ಒಟ್ಟು 8 ಕ್ರಸ್ಟ್ ಗೇಟ್‌ಗಳನ್ನು ಗದಗದಲ್ಲಿ ತಯಾರು ಮಾಡಲಾಗಿದೆ. ಉಳಿದ 7 ಗೇಟ್ ಟಿಬಿಡ್ಯಾಂನಲ್ಲಿ ತಯಾರು ಮಾಡಲಾಗಿದೆ. ಅಲ್ಲದೇ ಉಳಿದ 13 ಗೇಟ್‌ಗಳನ್ನು ಗದಗ ಮತ್ತು ಟಿಬಿಡ್ಯಾಂನಲ್ಲಿ ತಯಾರು ಮಾಡಲಾಗುತ್ತಿದೆ. ಸ್ವಲ್ಪ ದಿನದಲ್ಲೇ 28 ಕ್ರಸ್ಟ್ ಗೇಟ್ ಅಳವಡಿಕೆಗೆ ಲಭ್ಯವಾಗಲಿವೆ. ಕೊನೆಗೆ ಬೇಕಾದ ನಾಲ್ಕು ಗೇಟ್‌ಗಳನ್ನು ಸಿದ್ಧ ಮಾಡಿಕೊಂಡು; ಜಲಾಶಯದಲ್ಲಿ ನೀರು 40 ಟಿಎಂಸಿಗೆ ಇಳಿದರೆ, ಅಳವಡಿಕೆ ಕಾರ್ಯ ಆರಂಭವಾಲಿದೆ.ಜಲಾಶಯದ ಗೇಟ್‌ಗಳ ಸ್ಥಿತಿ ಸರಿಯಿಲ್ಲದ್ದರಿಂದ ಈ ಬಾರಿ ಜಲಾಶಯದಲ್ಲಿ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯ ಇದ್ದರೂ ಜಲಾಶಯದ ಸಂಗ್ರಹ ಸಾಮರ್ಥ್ಯ 80.003 ಟಿಎಂಸಿಗೆ ತಗ್ಗಿಸಲಾಗಿದೆ. ಈ ಬಾರಿ ಮುಂಗಾರು ಉತ್ತಮವಾಗಿದ್ದರಿಂದ ಜಲಾಶಯದ ನೀರು ತಗ್ಗುತ್ತಿಲ್ಲ. ಬೇಗನೆ ತಗ್ಗಿದ್ದರೆ ಅಕ್ಟೋಬರ್ ಅಂತ್ಯದಿಂದ ಗೇಟ್ ಅಳವಡಿಕೆಗೆ ತುಂಗಭದ್ರಾ ಮಂಡಳಿ ಪ್ಲಾನ್ ಮಾಡಿಕೊಂಡಿತ್ತು. ಆದರೆ ಆಗಿಲ್ಲ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಿರ್ಮಾಣ ಕಾರ್ಯ ನಡೆದಿದೆ. ಈಗಾಗಲೇ 15 ಗೇಟ್ ಸಿದ್ಧಗೊಂಡಿವೆ. ಇನ್ನು ಉಳಿದ ಗೇಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಲಾಶಯದಲ್ಲಿ ನೀರು 40 ಟಿಎಂಸಿಗೆ ತಗ್ಗಿದ ಬಳಿಕ ಗೇಟ್ ಅಳವಡಿಕೆ ಮಾಡಲಾಗುವುದು ಎನ್ನುತ್ತಾರೆ ತುಂಗಭದ್ರಾ ಮಂಡಳಿ ಅಧೀಕ್ಷಕ ಎಂಜನಿಯರ್ ನಾರಾಯಣ ನಾಯ್ಕ.