ನದಿಯ ದಡದಲ್ಲಿ ರಾಶಿ ರಾಶಿ ಕಸ
ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ಬೇಜವಾಬ್ದಾರಿಯೇ ಕಾರಣಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಗಂಗಾ ಸ್ನಾನ, ತುಂಗಾಪಾನ ಎಂಬ ನಾಣ್ನುಡಿ ಇದೆ. ಇದರರ್ಥ ತುಂಗಭದ್ರಾ ನದಿಯ ನೀರು ಕುಡಿಯಲು ಅಷ್ಟು ಪವಿತ್ರ ಎಂದು. ಆದರೆ, ಈಗ ಬೆಳೆದ ನಾಗರಿಕ ಸಮಾಜದ ಬೇಜವಾಬ್ದಾರಿಯಿಂದಾಗಿ ತುಂಗಭದ್ರಾ ನದಿ ಮಲಿನವಾಗುತ್ತಿದೆ.ತಾಲೂಕಿನಾದ್ಯಂತ ಹರಿದಿರುವ ಈ ನದಿಯ ಎರಡು ದಡ ನೋಡಿದರೆ ಎಷ್ಟು ಮಲಿನವಾಗಿದೆ ಎಂಬುದು ಗೊತ್ತಾಗುತ್ತದೆ. ಇನ್ನು ತುಂಗಭದ್ರಾ ಜಲಾಶಯದ ನೀರು ನೋಡಿದರಂತೂ ಪಕ್ಕಾ ಆಗುತ್ತದೆ. ಹಸಿರು ಬಣ್ಣ ಹೊಂದಿದ್ದು, ಜಲಾಶಯದ ತೀರಕ್ಕೆ ಹೋದರೆ ಗಬ್ಬುವಾಸನೆ ಬರುತ್ತದೆ. ತುಂಗಭದ್ರಾ ಜಲಾಶಯ ಕೆಳಭಾಗವಂತೂ ನೋಡುವಂತೆಯೇ ಇಲ್ಲ. ನದಿಯ ಎರಡು ದಡದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಕಸ ತುಂಬಿರುತ್ತದೆ.
ಸುತ್ತಮುತ್ತಲ ಪ್ರದೇಶದ ಜನರು ತಮ್ಮಲ್ಲಿರುವ ಕಸವನ್ನೆಲ್ಲ ಹೇರಿಕೊಂಡು ಹೋಗಿ, ನದಿಯ ದಡಕ್ಕೆ ಚೆಲ್ಲಿ ಬರುತ್ತಾರೆ. ಇಂತಹ ಕೆಟ್ಟ ಸಂಪ್ರದಾಯಕ್ಕೆ ಗ್ರಾಮ ಪಂಚಾಯಿತಿಯೂ ಹೊರತಾಗಿಲ್ಲ.ಇತ್ತೀಚೆಗಿನ ಸಂಶೋಧನೆಯಿಂದ ನದಿಯ ನೀರಿನಲ್ಲಿ, ಸಮುದ್ರದ ನೀರಿನಲ್ಲಿ ಪ್ಲಾಸ್ಟಿಕ್ ಚೂರು ಹಾಗೂ ಅಂಶ ಇರುವುದು ಪತ್ತೆಯಾಗುತ್ತಿದೆ. ತುಂಗಭದ್ರಾ ನದಿಯ ನೀರನ್ನು ಸಹ ಸಂಶೋಧನೆಗೆ ಒಳಪಡಿಸಿದ್ದೇ ಆದರೆ ಖಂಡಿತವಾಗಿಯೂ ಇದರ ಸತ್ಯಾಸತ್ಯತೆ ಅರಿವಿಗೆ ಬರುತ್ತದೆ.
ಹುಲಿಗೆಮ್ಮ ದೇವಸ್ಥಾನದ ಬಳಿ:ತುಂಗಭದ್ರಾ ನದಿಯ ಪಕ್ಕದಲ್ಲಿಯೇ ಹುಲಿಗೆಮ್ಮ ದೇವಸ್ಥಾನ ಇದ್ದು, ದೇವಸ್ಥಾನಕ್ಕೆ ಹುಣ್ಣಿಮೆಯ ದಿವಸ ಲಕ್ಷ ಲಕ್ಷ ಭಕ್ತರು, ನಿತ್ಯವೂ ಹತ್ತಾರು ಸಾವಿರ ಭಕ್ತರು, ಮಂಗಳವಾರ, ಶುಕ್ರವಾರ 20-50 ಸಾವಿರ ಭಕ್ತರು ಆಗಮಿಸುತ್ತಾರೆ. ಇನ್ನು ಜಾತ್ರೆ, ವಿಶೇಷ ಹುಣ್ಣಿಮೆಯ ವೇಳೆಯಲ್ಲಿ ನಾಲ್ಕಾರು ಲಕ್ಷ ಭಕ್ತರು ಆಗಮಿಸುತ್ತಾರೆ. ಹೀಗೆ ಆಗಮಿಸುವ ಭಕ್ತರಲ್ಲಿ ಬಹುತೇಕರು ನದಿಯಲ್ಲಿ ಸ್ನಾನ ಮಾಡುತ್ತಾರೆ ಮತ್ತು ಮನೆಯಲ್ಲಿ ಪೂಜೆ ಮಾಡಿದ ಅನೇಕ ಸಾಮಗ್ರಿಗಳನ್ನು ತಂದು ನದಿಗೆ ಹಾಕುವ ಸಂಪ್ರದಾಯ ಇದೆ. ಹೀಗಾಗಿ, ತುಂಗಭದ್ರಾ ನದಿ ಎನ್ನುವುದು ಭಕ್ತರ ಕಸ ಹಾಕುವ ತೊಟ್ಟಿಯಂತಾಗಿದೆ.
ದೇವಸ್ಥಾನ ಮಂಡಳಿ ಬೇಜವಾಬ್ದಾರಿ:ತುಂಗಭದ್ರಾ ನದಿಯ ದಡದಲ್ಲಿಯೇ ಇರುವ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಸ ನದಿಯಲ್ಲಿ ಹಾಕದಂತೆ ನಿರ್ಬಂಧ ಹೇರಿ ಕೈತೊಳೆದುಕೊಂಡಿದೆ. ಆದರೆ, ವಾಸ್ತವದಲ್ಲಿ ಅಲ್ಲಿಯೇ ಹಾಕುತ್ತಿದ್ದರೂ ಅದನ್ನು ನಿಯಂತ್ರಣ ಮಾಡದೇ ಬೇಜವಾಬ್ದಾರಿ ತೋರಿದೆ.
ಅಷ್ಟೇ ಅಲ್ಲ, ಭಕ್ತರಿಗೆ ಕಸ ಚೆಲ್ಲಲು ಪ್ರತ್ಯೇಕ ವ್ಯವಸ್ಥೆ ಮಾಡುತ್ತಿಲ್ಲ. ಕೋಟಿಕೋಟಿ ರುಪಾಯಿ ಕೊಳೆಯುತ್ತಿದ್ದರೂ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಪರಿಸರಕ್ಕೆ ಹಾನಿಯಾಗುವುದನ್ನು ತಡೆಯುತ್ತಿಲ್ಲ ಎನ್ನುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಕಸ ವಿಲೇವಾರಿ ಘಟಕ:
ಇಡೀ ರಾಜ್ಯಕ್ಕೆ ಮಾದರಿ ಎಂದು ಹೇಳಿಕೊಳ್ಳುವ ಕಸ ವಿಲೇವಾರಿ ಘಟಕ ಹುಲಿಗೆಮ್ಮ ದೇವಸ್ಥಾನದ ಹತ್ತಿರವೇ ಇದೆ. ಹುಲಿಗಿ, ಹೊಸಳ್ಳಿ ಹಾಗೂ ಹೊನ್ನೂರಮಟ್ಟಿ ಬಹುಗ್ರಾಮ ಪಂಚಾಯಿತಿಗಳ ತ್ಯಾಜ್ಯ ಸಂಸ್ಕರಣಾ ಘಟಕ ಇದೆ. ಆದರೂ ಈ ಕಸ ವಿಲೇವಾರಿ ಮಾಡುವ ಪ್ರಯತ್ನವೂ ನಡೆಯುತ್ತಿಲ್ಲ ಎನ್ನುವುದು ಬೇಸರ ಸಂಗತಿ.