ಪಾವಗಡಕ್ಕೆ ತುಂಗಭದ್ರಾ ನೀರು; ಸಿಎಂರಿಂದ ಇತಿಹಾಸ ಸೃಷ್ಠಿ

KannadaprabhaNewsNetwork |  
Published : Jul 22, 2025, 01:15 AM IST

ಸಾರಾಂಶ

ಶುದ್ಧ ಕುಡಿಯುವ ನೀರು ಕಲ್ಪಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಯನ್ನು ತಾಲೂಕಿನ ಜನಮನದಲ್ಲಿ ಜೀವಂತವಾಗಿರಲಿದ್ದು ಈ ಸಂದರ್ಭದಲ್ಲಿ ಸಿಎಂಗೆ ಅಭಿನಂದನೆ ಸಲ್ಲಿಸುವುದಾಗಿ ರಾಜ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭವಾರ್ತೆ ಪಾವಗಡ

ಜನಪರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಪ್ಲೋರೈಡ್ ಮುಕ್ತ ತಾಲೂಕನ್ನಾಗಿ ರೂಪಿಸುವ ಸಲುವಾಗಿ 2,352 ಕೋಟಿ ಬಿಡುಗಡೆ ಮಾಡುವ ಮೂಲಕ ತುಂಗಭದ್ರಾ ಹಿನ್ನೀರಿನ ಯೋಜನೆ ಜಾರಿಗೊಳಿಸಿ, ತಾಲೂಕಿನ ಮನೆಮನೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಯನ್ನು ತಾಲೂಕಿನ ಜನಮನದಲ್ಲಿ ಜೀವಂತವಾಗಿರಲಿದ್ದು ಈ ಸಂದರ್ಭದಲ್ಲಿ ಸಿಎಂಗೆ ಅಭಿನಂದನೆ ಸಲ್ಲಿಸುವುದಾಗಿ ರಾಜ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್‌ ಹೇಳಿದರು.

ತುಂಗಭದ್ರಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನೇಕ ಯೋಜನೆ ರೂಪಿಸುವ ಮೂಲಕ ರಾಜ್ಯದಲ್ಲಿ ಸಿದ್ದರಾಮಯ್ಯ ಇತಿಹಾಸ ಸೃಷ್ಟಿಸಿದ್ದಾರೆ. ರೈತ ಪರ , ದಲಿತ, ಅಲ್ಪಸಂಖ್ಯಾತ ಹಾಗೂ ಇತರೆ ಎಲ್ಲ ವರ್ಗದ ಪ್ರಗತಿಗೆ ಅನೇಕ ಜನಪರ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿದ್ದಾರೆ. ತಾಲೂಕಿನಲ್ಲಿ ತುಂಗಭದ್ರಾ ಯೋಜನೆ ಜೊತೆಗೆ 3 ಹಾಸ್ಟೆಲ್‌ಗಳ ಉದ್ಘಾಟನೆ ಸರ್ಕಾರದ ವಿವಿಧ ಇಲಾಖೆಯ ಸೌಲಭ್ಯಗಳನ್ನು ನೀಡಿದ್ದು ಸಂತಸ ತಂದಿದೆ ಎಂದರು.

ಕಳೆದ 25ವರ್ಷದ ಹಿಂದೆ ಇಲ್ಲಿನ ಮಾಜಿ ಸಚಿವ ವೆಂಕಟರಮಣಪ್ಪ, ಶುದ್ದ ನೀರು ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆದಿದ್ದರು. ಅಂದಿನ ಸಿಎಂ ವಿರೇಂದ್ರಪಾಟೀಲ್‌ ನಾಗಲಮಡಿಕೆ ಡ್ಯಾಂ ನಿರ್ಮಾಣ ಹಾಗೂ ಇಲ್ಲಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಕಲ್ಪಿಸಲು ಯೋಜನೆ ರೂಪಿಸಿದ್ದರು. ಹುಟ್ಟಿದ ಮಗು ಅಂಗವೈಕಲ್ಯದಿಂದ ಬಳಲುತ್ತಿದ್ದು ಜನಪರ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ, ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ನಮ್ಮ ಇತರೇ ಮುಖಂಡರ ಮನವಿಗೆ ಸ್ಪಂದಿಸಿದ್ದರು. ಇದರಿಂದ 5 ತಾಲೂಕುಗಳ 11,038 ಗ್ರಾಮಗಳಿಗೆ ಶುದ್ಧೀಕರಿಸಿದ ನೀರು ಸರಬರಾಜಾಗಲಿದೆ ಎಂದರು.

ಡಿ.ಕೆ.ಶಿವಕುಮಾರ್‌ ಇಂಧನ ಸಚಿವರಾಗಿದ್ದ ವೇಳೆ, 2500ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಸಾಥ್‌ ನೀಡಿದ ಕಾರಣ ಇಂದು ವಿಶ್ವ ಭೂಪಟದಲ್ಲಿ ಪಾವಗಡ ಹೆಸರು ರಾರಾಜಿಸುತ್ತಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣೀಭೂತರಾಗಿದ್ದು ಶಾಸಕ ವೆಂಕಟೇಶ್‌ ಮನವಿಗೆ ಸ್ಪಂದಿಸಿ ಇನ್ನೂ 2500ಮೆಗಾವ್ಯಾಟ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಅನುಮೋದನೆ ನೀಡಿದ್ದಾರೆ. ಈ ಎರಡು ಯೋಜನೆಗಳಿಂದ ತಾಲೂಕು ಪ್ರಗತಿದತ್ತ ಸಾಗಲು ಸಾಧ್ಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ,ಶಾಸಕ ಎಚ್‌.ವಿ.ವೆಂಕಟೇಶ್‌ ಮಾತನಾಡಿ, ತಾಲೂಕಿಗೆ ಸಿಎಂ ಸಿದ್ದರಾಮಯ್ಯ ಕೊಡುಗೆ ಅಪಾರವಾಗಿದ್ದು ತುಂಗಭದ್ರಾ ಕುಡಿಯುವ ನೀರು, ಸೋಲಾರ್‌ ಪಾರ್ಕ್‌ ನಿರ್ಮಾಣ ವಸತಿ ಶಾಲೆಗಳ ಮಂಜೂರಾತಿ ಇತರೆ ಅನೇಕ ರೀತಿಯ ಸೌಲಭ್ಯ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲಬೇಕಿದೆ. ಅವರು ಜಾರಿಗೆ ತಂದ ಯೋಜನೆಗಳು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಜೀವಂತವಾಗಿರಲಿವೆ. 14ಕೋಟಿ ವೆಚ್ಚದ ಸಿಸಿರಸ್ತೆ ಮಂಜೂರಾತಿ, ಅಲ್ಪಸಂಖ್ಯಾತರ ವಸತಿ ಶಾಲೆಗಳ ಮಂಜೂರಾತಿ ಕಲ್ಪಿಸಿಕೊಟ್ಟಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಡಬೇಕು. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿಗೆ ಸಹಕರಿಸಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್‌,ಸಹಕಾರ ಸಚಿವ ರಾಜಣ್ಣ ಅವರ ಅಶೀರ್ವಾದದ ಮೇರೆಗೆ ತುಮುಲ್‌ ಅಧ್ಯಕ್ಷರಾಗಿದ್ದು, ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಪ್ಲೊರೈಡ್ ನೀರು ಸೇವನೆಯಿಂದ ತಾಲೂಕಿನ ಜನತೆ ಅನೇಕ ರೋಗಗಳಿಗೆ ಗುರಿಯಾಗಿದ್ದರು. ಈ ಬಗ್ಗೆ ನಾವು ಸರ್ಕಾರದ ಗಮನ ಸೆಳೆಯಲಾಗಿತ್ತು. ತುಂಗಭದ್ರಾ ಜಲಾಶಯದಿಂದ ನೀರು ಸರಬರಾಜು ಅಗಿದ್ದು ಸಂತಸ ತಂದಿದೆ. ಪಾರ್ಲಿಮೆಂಟ್‌ ಅಧಿವೇಶನವಿದ್ದರೂ ಮಾಜಿ ಸಚಿವ ವೆಂಕಟರಮಣಪ್ಪ ಅವರ ಒತ್ತಾಯದ ಮೇರೆಗೆ ಆಗಮಿಸಿ ಭಾಗವಹಿಸಿದ್ದು ಸಂತಸ ತಂದಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆ ಸ್ಥಾಪನೆಗೆ ಅವಕಾಶ ಕಲ್ಪಿವಂತೆ ಸಿಎಂ ಗಮನ ಸೆಳೆದರು.

ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ,ಮಾಜಿ ಸಚಿವ ವೆಂಕಟರಮಣಪ್ಪ, ಆರ್‌.ರಾಜೇಂದ್ರ, ಶ್ರೀನಿವಾಸ್‌ , ಜಿಲ್ಲಾಧಿಕಾರಿ ಶುಭಕಲ್ಯಾಣ್‌, ಜಿಪಂ ಸಿಇಒ ಜಿ.ಪ್ರಭು, ಸೋಲಾರ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಲ್ಲಿನ ಸೋಲಾರ್‌ ಅಭಿವೃದ್ಧಿ ಪ್ರಾಧಿಕಾರದ ಎಇಇ ಮಹೇಶ್‌ ಇತರೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು