ಕನ್ನಡಪ್ರಭ ವಾರ್ತೆ ರಾಯಚೂರುತುಂಗಭದ್ರಾ ನೀರಾವರಿ ಇಲಾಖೆಯ ಇಇ ವಿಜಯಲಕ್ಷ್ಮೀ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು, ರಾಯಚೂರು ಜಿಲ್ಲೆಯ 12 ಉಪ ವಿಭಾಗದ 748 ಗ್ಯಾಂಗಮನ್ ಕಾರ್ಮಿಕರ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘ (ಟಿಯುಸಿಐ) ನೇತೃತ್ವದಲ್ಲಿ ಹೆದ್ದಾರಿ ಬಂದ್ ಹೋರಾಟವನ್ನು ಮಂಗಳವಾರ ನಡೆಸಲಾಯಿತು.ತಾಲೂಕಿನ ಸಾಥ್ ಮೈಲ್ ಬಳಿಯ ಹೆದ್ದಾರಿಯಲ್ಲಿ ಸೇರಿದ ಸಂಘದ ಮುಖಂಡರು,ಪದಾಧಿಕಾರಿಗಳು,ಕಾರ್ಮಿಕರು ರಸ್ತೆ ಮೇಲೆ ಕುಳಿತು ಸಂಚಾರ ತಡೆ ನಡೆಸಿದರು. ಇದರಿಂದಾಗಿ ಸುಮಾರು ಎರಡೂವರೆ ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದರಿಂದ ಪ್ರಯಾಣಿಕರು, ಸಾರ್ವಜನಿಕರು, ವಾಹನಗಳ ಚಾಲಕರು ಪರದಾಡಿದರು. ಹೋರಾಟ ಉದ್ದೇಶಿಸಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಅವರು, ಸಾಥ್ ಮೇಲೆ ಕ್ರಾಸ್ ನಲ್ಲಿ ಜಿಲ್ಲಾ ಮಟ್ಟದ ಹೆದ್ದಾರಿ ತಡೆ ಚಳವಳಿ ನಡೆಸಲು ರಾಜ್ಯ ನೀರಾವರಿ ನಿಗಮದ ಸಿರವಾರ ಸಿಂಧನೂರ ಮತ್ತು ಯರಮರಸ ವಿಭಾಗದ ಕಾರ್ಯಪಾಲಕ ಅಭಿಯಂತರರು ಕಾರಣರಾಗಿದ್ದಾರೆ. ಹಾಗೆ ರಾಯಚೂರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ಇದಕ್ಕೆ ಹೊಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ ಎಡದಂಡೆ ಕಾಲುವೆ ವ್ಯಾಪ್ತಿಯ ಯರಮರಸ್, ಸಿಂಧನೂರ,ಸಿರವಾರ ವಿಭಾಗಗಳ ಒಟ್ಟು 748 ನೀರು ಸರಬರಾಜು, ಗ್ಯಾಂಗ್ ಮ್ಯಾನ್ ಕಾರ್ಮಿಕರ ಕಳೆದ 5 ತಿಂಗಳ ಸಂಬಳ ಪಾವತಿ ಮಾಡದೆ ಕಾರ್ಮಿಕ ಹಾಗೂ ಕಾನೂನು ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಲಾಗುವುದು ಎಂದರು.ಈ ಕೂಡಲೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಇಲಾಖೆ ಇ ಇ ವಿಜಯಲಕ್ಷ್ಮೀ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು,12 ಉಪ ವಿಭಾಗದ 748 ಗ್ಯಾಂಗ್ ಮನ್ ಕಾರ್ಮಿಕರ ಬಾಕಿ ವೇತನ ಪಾವತಿಗೆ ಮುಂದಾಗಬೇಕು, ವೇತನ ಪಾವತಿ ಕಾಯ್ದೆ -1939 ರ ಪ್ರಕಾರ ಪ್ರತಿ ತಿಂಗಳು ಐದನೇ ತಾರೀಖ ಒಳಗೆ ವೇತನ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಕನಿಷ್ಠ ವೇತನ ಕಾಯ್ದೆ 1048 ರ ಪ್ರಕಾರ ದಿನಕೆ ಎಂಟು ಗಂಟೆ ಕೆಲಸ ವಾರದ ಹಾಗೂ ರಾಷ್ಟ್ರೀಯ ರಜೆ ನೀಡಬೇಕು,ಗುತ್ತಿಗೆ ಕಾರ್ಮಿಕ (ರದ್ದತಿ ಹಾಗೂ ನಿಯಂತ್ರಣ) ಕಾಯ್ದೆ 1970ರ ಪ್ರಕಾರ ಕಾರ್ಮಿಕರ ಸಂಬಳಕ್ಕೆ ಪ್ರಧಾನ ಮಾಲೀಕರೇ ಹೊಣೆ ಎಂದು ಜವಾಬ್ದಾರಿ ನಿಭಾಯಿಸಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರ ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲಿ ಕಾನೂನಾತ್ಮಕ ಪರಿಹಾರವನ್ನು ಅನುಷ್ಠಾನಗೊಳಿಸಬೇಕು ಇಲ್ಲವಾದಲ್ಲಿ ಜಿಲ್ಲಾಡಳಿತದ ವಿರುದ್ಧ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಹೆದ್ದಾರಿ ತಡೆ ಹೋರಾಟದಲ್ಲಿ ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ. ಗಂಗಾಧರ, ಜಿಲ್ಲಾಧ್ಯಕ್ಷ ಜಿ.ಅಮರೇಶ, ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್, ಕಾರ್ಮಿಕ ಮುಖಂಡರಾದ, ರುಕ್ಮಪ್ಪ, ಬಸವರಾಜ ಯಾದವ್, ಹನುಮಂತಪ್ಪ, ಆಂಜನೇಯ, ಮುದಿಯಪ್ಪ, ಅಮರೇಗೌಡ, ಶರಣಪ್ಪ, ರಾಮಣ್ಣ ಪೋತ್ನಾಳ್, ರಾಧಾಕೃಷ್ಣ, ಮುದುಕಪ್ಪ, ಎಂ ನಿಸರ್ಗ,ಸಿದ್ದಪ್ಪ, ಹನುಮೇಶ, ಹೆಚ್ ಮಲ್ಲೇಶ್, ಎಂ ನಿರಂಜನಕುಮಾರ್, ಆಂಜನೇಯ, ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.ಸಮಸ್ಯೆಗಳಿಗೆ ಪರಿಹಾರದ ಭರವಸೆ, ಚಳವಳಿ ಮೊಟಕು ಹೋರಾಟ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸುರೇಶ ವರ್ಮಾ ಹಾಗೂ ನೀರಾವರಿ ಅಧಿಕಾರಿಗಳ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಅವರು ಬಾಕಿ ಇರುವ ನೀರಾವರಿ ಕಾರ್ಮಿಕರ ವೇತನವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಂಡು ನಂತರ 12 ಉಪ ವಿಭಾಗದ ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ ಭವಿಷ್ಯ ನಿಧಿ, ಇಎಸ್ ಐ ಹಾಗೂ ಇತರೆ ಬೇಡಿಕೆಗಳನ್ನು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರಿಂದ ಚಳವಳಿಯನ್ನು ಕೈಬಿಟ್ಟರು.