ಕನ್ನಡಪ್ರಭ ವಾರ್ತೆ ತುರುವೇಕೆರೆ
ಹಡವನಹಳ್ಳಿಯ ಅಂಗನವಾಡಿಯ ಪ್ಲೇ ಹೋಮ್ ಗೆ ಸೇರಿದ್ದ ಹರ್ಷ ಮತ್ತು ವಿದ್ಯಾ ದಂಪತಿಯ ೨ ವರ್ಷದ ಪುತ್ರ ರುದ್ರೇಶ ಪೆಟ್ಟು ತಿಂದಿರುವ ದುರ್ದೈವಿ. ಗುರುವಾರ ರುದ್ರೇಶ್‌ನ ಅಜ್ಜಿ ಕಲ್ಪನಾ ಅವರು ರುದ್ರೇಶನನ್ನು ಅಂಗನವಾಡಿಯಿಂದ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆ ವೇಳೆ ಅಜ್ಜಿ ಕಲ್ಪನಾ ಮೊಮ್ಮಗ ರುದ್ರೇಶನನ್ನು ಸೊಂಟದ ಮೇಲೆ ಎತ್ತಿಕೊಂಡು ಅಂಗನವಾಡಿಯಿಂದ ಮಕ್ಕಳ ಮನೆಗೆ ನೀಡಲಾಗುವ ದಿನಸಿ ವಸ್ತುಗಳ ವಿಚಾರಣೆ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅಂಗನವಾಡಿಯ ಮೇಲ್ಚಾವಣಿಯ ಸಿಮೆಂಟಿನ ತುಂಡೊಂದು ಮಗು ರುದ್ರೇಶ್‌ನ ಮೇಲೆ ಬಿದ್ದಿತು. ಗಾಯಗೊಂಡ ರುದ್ರೇಶನನ್ನು ಕೂಡಲೇ ದಂಡಿನಶಿವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಉಸ್ತುವಾರಿಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮಗು ರುದ್ರೇಶ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.
ಹೊಸ ಕಟ್ಟಡ: ೨೦೧೮-೧೯ ರಲ್ಲಿ ಕಟ್ಟಡ ಕಟ್ಟಡ ಅನುಮತಿ ನೀಡಲಾಗಿತ್ತು. ೨೧-೨೨ ರಲ್ಲಿ ಅಂಗನವಾಡಿ ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಕಳಪೆ ಕಾಮಗಾರಿ ಮಾಡಿದ ಫಲವಾಗಿ ಕಟ್ಟಡದ ಮೇಲ್ಚಾವಣಿ ಕಿತ್ತು ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಸಿಡಿಪಿಒ ಎಸ್. ಗೋಪಾಲಯ್ಯ, ಇಒ ಶಿವರಾಜಯ್ಯ ಭೇಟಿ ನೀಡಿದ್ದರು.ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಶಿಥಿಲಾವಸ್ಥೆಯಲ್ಲಿರುವುದರಿಂದ ಸಂಪೂರ್ಣವಾಗಿ ದುರಸ್ತಿ ಮಾಡಿಸಲು ಇಒ ಶಿವರಾಜಯ್ಯ ಗ್ರಾಮ ಪಂಚಾಯ್ತಿ ಪಿಡಿಒ ಗೆ ಸೂಚನೆ ನೀಡಿದ್ದಾರೆ.