ಊರ ಜನರ ನಡಿಗೆ ಮಕ್ಕಳ ಕಲಿಕೆಯ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿದ ಅಕ್ಷರ ಫೌಂಡೇಶನ್ ಬೆಳಗಾವಿ ವಿಭಾಗೀಯ ನೋಡಲ್ ಅಧಿಕಾರಿ
ಟಿವಿ ಮತ್ತು ಮೊಬೈಲ್ ಹಾವಳಿಯಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಕ್ಷರ ಫೌಂಡೇಶನ್ ಬೆಳಗಾವಿ ವಿಭಾಗೀಯ ನೋಡಲ್ ಅಧಿಕಾರಿ ಅಂಜಲಿನಾ ಗ್ರೇಗರಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಅಡವಿಸೋಮಾಪೂರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಊರ ಜನರ ನಡಿಗೆ ಮಕ್ಕಳ ಕಲಿಕೆಯ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಾಲಕರು ಮಕ್ಕಳ ಎದುರು ಟಿವಿ, ಮೊಬೈಲ್ ನೋಡುವುದು ಮತ್ತು ಜಗಳವಾಡುವುದನ್ನು ನಿಲ್ಲಿಸಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಿಕ್ಷಕರೊಂದಿಗೆ ಪಾಲಕರೂ ಮಕ್ಕಳ ಕಲಿಕೆಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ವಿ.ಎಂ. ಹಿರೇಮಠ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ನಿರಂತರ ಕಲಿಕೆಗೆ ಒತ್ತು ನೀಡಬೇಕು ಎಂದರು. ಪಾಲಕರಿಗಾಗಿ ನಡೆದ ಗಣಿತ ಪರೀಕ್ಷೆಯ ಪುರುಷರ ವಿಭಾಗದಲ್ಲಿ ಮುತ್ತಣ್ಣ ಹುಲಗಣ್ಣವರ (ಪ್ರಥಮ), ಹನಮಂತ ಪುರದ (ದ್ವಿತೀಯ), ರಮೇಶ ಗೌಡ್ರ (ತೃತೀಯ) ಹಾಗೂ ಮಹಿಳೆಯರ ವಿಭಾಗದಲ್ಲಿ ಲಲಿತಾ ನಾಗಾವಿ (ಪ್ರಥಮ), ರಿಯಾನಾಬೇಗಂ ಪೆಂಡಾರಿ (ದ್ವಿತೀಯ), ರಜೀಯಾಬೇಗಂ ಕುಮನೂರ (ತೃತೀಯ) ಬಹುಮಾನ ಪಡೆದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಹೊಂಬಳ, ಮಾರುತಿ ಮಲ್ಲಾಪೂರ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.