ಗಡಿ ಗ್ರಾಮಗಳತ್ತ 12 ಕಾಡಾನೆ: ಎಚ್ಚರಿಕೆಯಿಂದ ಇರಿ

KannadaprabhaNewsNetwork |  
Published : Dec 19, 2024, 12:31 AM IST
18ಕೆಬಿಪಿಟಿ.3.ಬಂಗಾರಪೇಟೆ ತಾಲೂಕಿನ ಗಡಿ ಗ್ರಾಮಗಳಾದ ಬತ್ತಲಹಳ್ಳಿ ಗ್ರಾಮದಲ್ಲಿ ಆನೆಗಳ ಆಗಮನದ ಬಗ್ಗೆ ರೈತರಿಗೆ ಅರಂಣ್ಯ ಇಲಾಖೆ ಸಿಬ್ಬಂದಿ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿರುವುದು. | Kannada Prabha

ಸಾರಾಂಶ

ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಒಟ್ಟು 12 ಆನೆಗಳು ಸುತ್ತಾಡುತ್ತಿದ್ದು, ಕಾರ್ಯಾಚರಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಗಡಿಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಒಟ್ಟು 12 ಆನೆಗಳು ಸುತ್ತಾಡುತ್ತಿದ್ದು, ಕಾರ್ಯಾಚರಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಗಡಿಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಮನವಿ ಮಾಡಿದ್ದಾರೆ.

ತಾಲೂಕಿನ ಗಡಿ ಗ್ರಾಮಗಳಲ್ಲಿ ಆನೆಗಳ ಆಗಮನದ ಬಗ್ಗೆ ರೈತರಿಗೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಿ ಮಾತನಾಡಿ, ಕಳೆದ ಹಲವು ದಿನಗಳಿಂದ ಒಂಟಿ ಆನೆಯೊಂದು ಗಡಿಭಾಗದಲ್ಲಿ ಸುತ್ತಾಡುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ತಮಿಳುನಾಡಿನ ಅರಣ್ಯ ಪ್ರದೇಶದಿಂದ 11 ಆನೆಗಳು ರಾಜ್ಯದ ಅರಣ್ಯ ಪ್ರದೇಶಕ್ಕೆ ಲಗ್ಗೆ ಇಟ್ಟಿವೆ. ಆ ಗುಂಪಿಗೆ ಒಂಟಿ ಆನೆಯೂ ಸೇರಿದ್ದು, ಕಾಡಂಚಿನ ಕದರಿನತ್ತ, ಮಲ್ಲೇಶನಪಾಳ್ಯ ಬತ್ಲಹಳ್ಳಿ, ಚತ್ತಗುಟ್ಟಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಒಟ್ಟು 12 ಆನೆಗಳು ಸುತ್ತಾಡುತ್ತಿವೆ ಎಂದು ಹೇಳಿದರು.

ತಮಿಳುನಾಡಿನ ಹೆಬ್ರಿಯ ಅರಣ್ಯ ಪ್ರದೇಶಕ್ಕೆ 8 ಆನೆಗಳನ್ನು ಕಾರ್ಯಾಚರಣೆ ಮಾಡಿದ್ದು, ಉಳಿದ 4 ಆನೆಗಳು ರಾಜ್ಯದ ಅರಣ್ಯ ಪ್ರದೇಶದಲ್ಲಿಯೇ ಮೊಕ್ಕಾಂ ಹೂಡಿವೆ. ಹೆಬ್ರಿ ಅರಣ್ಯ ಪ್ರದೇಶದ ಕಡೆ ಹೋಗಿರುವಂತಹ ಆನೆಗಳು ಮತ್ತೆ ರಾಜ್ಯದ ಗಡಿಯತ್ತ ಬರುವ ಸಾಧ್ಯತೆ ಇದೆ. ಅವುಗಳನ್ನು ಕಾರ್ಯಾಚರಣೆ ಮಾಡುವ ಸಲುವಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜತೆಗೆ 25 ಜನರ ಎರಡು ತಂಡವನ್ನು ರಚಿಸಿದ್ದು, ತಂಡಗಳು ಗಡಿ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದಾರೆ. ಜತೆಗೆ ಗ್ರಾಮಗಳಲ್ಲಿ ಕಾಡಾನೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಆನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾಡಿನಲ್ಲಿರುವಂತಹ ಆನೆಗಳ ಗುಂಪು ಬೆಳಗಿನ ಜಾವ 3 ಗಂಟೆಯ ನಂತರ ಮೇವಿಗಾಗಿ ಕಾಡಿನಿಂದ ಹೊರಬಂದು ರೈತರ ಜಮೀನಿಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಆದ್ದರಿಂದ ರೈತರು ಎಚ್ಚರಿಕೆಯಿಂದ ಇದ್ದು, ರಾತ್ರಿ ವೇಳೆ ಬೆಳೆಗೆ ನೀರಾಯಿಸಲು ಹೋಗುವುದು ನಿಲ್ಲಿಸಬೇಕು. ಗಡಿಭಾಗದಲ್ಲಿ ಒಂಟಿಯಾಗಿ ಓಡಾಡುವುದನ್ನು ಸಹ ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಡಾನೆಗಳನ್ನು ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಆನೆಗಳು ಕಂಡುಬಂದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗುವುದನ್ನು ನಿಲ್ಲಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ವಿದ್ಯಾರ್ಥಿಗಳ ಬಾಳಿಗೆ ಸೂರ್ಯನಂತೆ ಬೆಳಕಾಗಬೇಕು
ಗಾಂಧಿ ಹೆಸರ ಅಳಿಸಲು ಬಿಜೆಪಿ ಪಿತೂರಿ: ಸಿಎಂ