ಜಿಲ್ಲೆಯ ಇಬ್ಬರು ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork |  
Published : Nov 01, 2025, 01:15 AM IST
2.ಎಚ್. ಸಿದ್ಧಯ್ಯ | Kannada Prabha

ಸಾರಾಂಶ

ಕನಕಪುರ: ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಹಾರೋಹಳ್ಳಿಯ ನಿವೃತ್ತ ಐಎಎಸ್ ಅಧಿಕಾರಿ ಎಚ್.ಸಿದ್ದಯ್ಯ ಮತ್ತು ಕನಕಪುರ ತಾಲೂಕಿನ ರಂಗಭೂಮಿ ಕಲಾವಿದ ಎಚ್.ಎಂ.ಪರಮಶಿವಯ್ಯ ಆಯ್ಕೆಯಾಗಿದ್ದಾರೆ.

ಕನಕಪುರ: ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಹಾರೋಹಳ್ಳಿಯ ನಿವೃತ್ತ ಐಎಎಸ್

ಅಧಿಕಾರಿ ಎಚ್.ಸಿದ್ದಯ್ಯ ಮತ್ತು ಕನಕಪುರ ತಾಲೂಕಿನ ರಂಗಭೂಮಿ ಕಲಾವಿದ ಎಚ್.ಎಂ.ಪರಮಶಿವಯ್ಯ ಆಯ್ಕೆಯಾಗಿದ್ದಾರೆ.

ಆಡಳಿತ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಎಚ್ .ಸಿದ್ದಯ್ಯ ಮತ್ತು ರಂಗಭೂಮಿ ಕ್ಷೇತ್ರದಿಂದ ಎಚ್.ಎಂ.ಪರಮಶಿವಯ್ಯ ಅವರಿಗೆ 70ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಇಬ್ಬರು ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಎಚ್.ಸಿದ್ದಯ್ಯ ಪರಿಚಯ:

ಸಿದ್ಧಯ್ಯನವರು ಮೂಲತಃ ಹಾರೋಹಳ್ಳಿ ಗ್ರಾಮದವರು. 1974 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಎಂ. ಎ ಸ್ನಾತಕೋತ್ತರ ಪದವಿ ಪಡೆದು 1976 ರಲ್ಲಿ ಕೆ ಎ ಎಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಆಡಳಿತ ಸೇವೆಗೆ ಸೇರಿದರು. 1978 ರಲ್ಲಿ ತರಬೇತಿ ಮುಗಿಸಿ ಬೆಳಗಾವಿ ಉಪವಿಭಾಗದ ಉಪ ವಿಭಾಗಾಧಿಕಾರಿಯಾಗಿ ಆಡಳಿತ ಸೇವೆ ಆರಂಭಿಸಿದರು.

1986 ರಲ್ಲಿ ಐಎಎಸ್ ದರ್ಜೆಗೆ ಮುಂಬಡ್ತಿ ಪಡೆದರು. 2013ರಲ್ಲಿ ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉಪಾಧ್ಯಕ್ಷ, ಉನ್ನತ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ 2007 ರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

2011ರಲ್ಲಿ ಬಿಬಿಎಂಪಿ ಆಯುಕ್ತರಾಗಿದ್ದ ಸಮಯದಲ್ಲಿ ನಗರದ ಸ್ವಚತೆಗಾಗಿ ಆಟೋಗಳ ಮೂಲಕ ಪ್ರಚಾರ ನಡೆಸಿದ್ದು, ಆಸ್ತಿಗಳಿಗೆ ಪಿಐಡಿ ವ್ಯವಸ್ಥೆ ಜಾರಿಗೆ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು.

ಬಿಬಿಎಂಪಿ ಆಯುಕ್ತ ಅವಧಿಯ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ನಗರ ರತ್ನ, ಬ್ಯಾರ್ಸಿಲೋನಿಯಾ ದೇಶ ನೀಡುವ ಅಂತಾರಾಷ್ಟ್ರೀಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿದೆ.

2018 ರಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಸದರಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ರಾಜ್ಯ ಕಾರ್ಯದರ್ಶಿ ಯಾಗಿ, ಬಿಬಿಎಂಪಿ ಪುನರ್ ರಚನಾ ಸಮಿತಿ ಸದಸ್ಯರಾಗಿ, ಬೆಂಗಳೂರು ವಿಷನ್ ಗ್ರೂಪ್ ಸದಸ್ಯರಾಗಿ, ಕೆರೆ ಪುನಃಶ್ಚೇತನ ಮತ್ತು ಪುನರ್ ಸ್ಥಾಪನಾ ಸಮಿತಿ ಸದಸ್ಯರಾಗಿ, ಬ್ರ್ಯಾಂಡ್ ಬೆಂಗಳೂರು ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಗಣನೀಯ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಎಚ್.ಎಂ.ಪರಮಶಿವಯ್ಯ ಪರಿಚಯ:

1982 ರಿಂದ ಸತತವಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಪರಮಶಿವಯ್ಯ ಕನಕಪುರ ತಾಲೂಕಿನ ಏಳಗಳ್ಳಿ ಗ್ರಾಮದವರಾಗಿದ್ದಾರೆ.

ತಮ್ಮ 15ನೇ ವಯಸ್ಸಿನಲ್ಲೇ ರಂಗಭೂಮಿ ಕಲಾವಿದರಾಗಿ ತಮ್ಮ ಕಲೆಯನ್ನು ಆರಂಭಿಸಿದ ಇವರು ಕೃಷ್ಣಯ್ಯನದೊಡ್ಡಿಯ ವಿಶ್ವೋದಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿವರೆಗೂ ಶಿಕ್ಷಣ ಪಡೆದು ನಂತರ ತಮ್ಮ ತಂದೆಯವರ ಮಾರ್ಗದರ್ಶನದಲ್ಲಿ ರಂಗಭೂಮಿ ಪ್ರವೇಶಿಸಿ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ತಾಲೂಕಾದ್ಯಂತ ಚಿರಪರಿಚಿತ ರಾಗಿದ್ದಾರೆ, ತಾವು ಕಲಿತ ಶಾಲೆಯ ಶಿಕ್ಷಕರಿಗೆ ಮೊದಲಿಗೆ ನಾಟಕ ನಿರ್ದೇಶನ ಮಾಡುವ ಮೂಲಕ ತಮ್ಮ ಜೀವನ ವನ್ನು ಕಲಾ ಕ್ಷೇತ್ರಕ್ಕೆ ಮೀಸಲಿಟ್ಟರುವ ಇವರು ಈಗಾಗಲೇ ರಾಮಾಯಣ, ಕುರುಕ್ಷೇತ್ರ, ರಾಮಾಂಜನೇಯ ಯುದ್ಧ, ದಕ್ಷ ಯಜ್ಞ, ದಾನಶೂರಕರ್ಣ, ಬಸವೇಶ್ವರ ನಾಟಕಗಳು ಸೇರಿದಂತೆ ಹಲವು ಪೌರಾಣಿಕ ನಾಟಕಗಳನ್ನು ಗ್ರಾಮೀಣ ಭಾಗಗಳಲ್ಲಿ ತಾವೇ ಸ್ವತಃ ನಿರ್ದೇಶಿಸಿ ಪ್ರದರ್ಶನ ಮಾಡಿ ರಂಗಭೂಮಿ ಕಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇವರ ಕಲೆಯನ್ನು ಗುರುತಿಸಿ ಮಾಸ್ಟರ್ ಹಿರಣ್ಣಯ್ಯ, ಕವಿ ಗಳಾದ ನಿಸಾರ್ ಅಹಮದ್ , ಕೆ. ಎಸ್. ಶಿವರುದ್ರಪ್ಪ ಸನ್ಮಾನಿಸಿ ಗೌರವಿಸಿರುವುದು ಇವರ ರಂಗಭೂಮಿ ಆಸಕ್ತಿಯನ್ನು ತೋರಿಸುತ್ತದೆ.

ಈ ಇಬ್ಬರು ಮಹನೀಯರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದು ಬೆಂಗಳೂರು ದಕ್ಷಿಣ ಜಿಲ್ಲೆಗೆ ಹಿರಿಮೆ ತಂದಿದೆ.

31ಕೆಆರ್ ಎಂಎನ್ 2,3.ಜೆಪಿಜಿ

2.ಎಚ್. ಸಿದ್ಧಯ್ಯ

3.ಪರಮಶಿವಯ್ಯ

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!