ಜಾನುವಾರು ಕಳ್ಳತನ: ಇಬ್ಬರ ಬಂಧನ

KannadaprabhaNewsNetwork | Published : Jan 23, 2024 1:46 AM

ಸಾರಾಂಶ

ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ರಟ್ಟೀಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ರಟ್ಟೀಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ರಟ್ಟೀಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಕವಳಿಕುಪ್ಪಿ, ರಟ್ಟೀಹಳ್ಳಿ, ಕಡೂರ, ಅಣಜಿ, ಚಿಕ್ಕಬ್ಬಾರ ಗ್ರಾಮಗಳ ಹಾಗೂ ಹಿರೇಕೆರೂರ ಠಾಣಾ ವ್ಯಾಪ್ತಿಯ ಹಿರೇಮೋರಬ, ಹಿರೇಯಡಚಿ ಗ್ರಾಮಗಳು ಸೇರಿದಂತೆ 8 ಪ್ರಕರಣ ಬೆನ್ನಟ್ಟಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತರಿಂದ ₹1.5 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಎಸ್.ಪಿ. ಗೋಪಾಲ ಸಿ., ಡಿವೈಎಸ್‌ಪಿ ಗಿರೀಶ ಬೋಜಣ್ಣನವರ, ಸಿಪಿಐ ಬಸವರಾಜ ಪಿ.ಎಸ್. ಮಾರ್ಗದರ್ಶನದ ಮೇರೆಗೆ ರಟ್ಟೀಹಳ್ಳಿ ಪಿಎಸ್‌ಐ ಜಗದೀಶ ಜೆ. ನೇತೃತ್ವದಲ್ಲಿ ಮಾಲತೇಶ ನ್ಯಾಮತಿ, ರವಿ ಅಳಲಗೇರಿ, ಬಿ.ಆರ್. ಸಣ್ಣಪ್ಪನವರ, ರವಿ ಲಮಾಣಿ, ರಘು ಕದರಮುಂಡಲಗಿ, ಹರೀಶ ಹಲಗೇರಿ, ಡಿ.ಬಿ. ಗುತ್ತಾಳರ, ಎಫ್.ಎನ್. ಕುಂದೂರ, ಮಾರುತಿ ಹಾಲಬಾವಿ ಕಾರ್ಯಾಚರಣೆಯಲ್ಲಿದ್ದರು.

ಅಪರಿಚಿತ ವಾಹನ ಡಿಕ್ಕಿ-ವ್ಯಕ್ತಿ ಸಾವು:ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ರಾಣಿಬೆನ್ನೂರು ತಾಲೂಕಿನ ಕಮದೋಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಅಂಡರ್ ಬ್ರಿಡ್ಜ್‌ನಲ್ಲಿ ನಡೆದಿದೆ.ಹಾನಗಲ್ ತಾಲೂಕಿನ ಕಲ್ಲಹಕ್ಕಲ ಗ್ರಾಮದ ಶಿವಾಜಿ ಮಾಲತೇಶ ಸಾತೇನಹಳ್ಳಿ(38) ಮೃತ ದುರ್ದೈವಿ. ಈತನು ಬ್ರಿಡ್ಜ್ ಕೆಳಗೆ ಹೆಣ್ಣುಮಕ್ಕಳ ವೇಷ ಧರಿಸಿಕೊಂಡು ಭಿಕ್ಷೆ ಬೇಡುತ್ತಿದ್ದ ಸಮಯದಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದಾನೆಂದು ಮೃತನ ಪತ್ನಿ ದೂರು ನೀಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸ್‌ನಲ್ಲಿ ದರೋಡೆ, ₹10 ಲಕ್ಷ ಲಪಟಾಯಿಸಿದ ಕಳ್ಳರು:ಬಂಗಾರ ಖರೀದಿಸಲು ಬಸ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ₹10 ಲಕ್ಷವನ್ನು ದರೋಡೆ ಮಾಡಿದ ಘಟನೆ ರಾಣಿಬೆನ್ನೂರು ತಾಲೂಕಿನ ಚಳಗೇರಿ ದಾಬಾವೊಂದರ ಹತ್ತಿರ ನಡೆದಿದೆ.ದಾವಣಗೆರೆಯ ವಿನೋದನಗರದ ನಿವಾಸಿ ವೆಂಕಟೇಶ ವಿಠ್ಠಲ ಪುರುಷನ್ ಹಣ ಕಳೆದುಕೊಂಡ ವ್ಯಕ್ತಿ. ಈತನು ಜನಾರ್ದನ ಕುರಡೇಕರ ಎಂಬುವರ ಬಳಿ ಕೆಲಸ ಮಾಡಿಕೊಂಡಿದ್ದು, ಜನಾರ್ದನ ವೆಂಕಟೇಶ ಅವರಿಗೆ ₹10 ಲಕ್ಷ ನೀಡಿ ಗಟ್ಟಿ ಬಂಗಾರ ಖರೀದಿಸಲು ತಿಳಿಸಿದ್ದರು. ಅದರಂತೆ ವೆಂಕಟೇಶ ಬಳ್ಳಾರಿಯಿಂದ ಮಂಗಳೂರಿಗೆ ಹೋಗುವ ಬಸ್‌ನಲ್ಲಿ ಪ್ರಯಾಣಿಸುತ್ತಿರುವಾಗ ರಾಣಿಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಹತ್ತಿರದ ದಾಬಾಕ್ಕೆ ಬಸ್‌ನ್ನು ಊಟಕ್ಕೆ ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ ಹಣದ ಜೊತೆಗೆ ಬಸ್‌ನಲ್ಲಿ ಒಬ್ಬಂಟಿಯಾಗಿದ್ದ ವೆಂಕಟೇಶನ ಮೇಲೆ ಮಾಸ್ಕ್ ಧರಿಸಿದ ಮೂವರು ಹಲ್ಲೆ ಮಾಡಿ ಹಣದ ಬ್ಯಾಗ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ವೆಂಕಟೇಶ ಪೊಲೀಸರಿಗೆ ದೂರು ನೀಡಿದ್ದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article