ನದಿಹರಳಳ್ಳಿ ತುಂಗಭದ್ರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

KannadaprabhaNewsNetwork |  
Published : Mar 26, 2024, 01:00 AM IST
೨೫ ಎಚ್‌ಆರ್‌ಆರ್ ೧ಪೋಷಕರು ಹಾಗೂ ಗ್ರಾಮಸ್ಥರು ಮಕ್ಕಳ ದೇಹವನ್ನು ಗುತ್ತೂರಿನ ನದಿಯ ದಡದಲ್ಲಿ ಇಟ್ಟು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟಸಿದರು. ೨೫ ಎಚ್‌ಆರ್‌ಆರ್ ೧ಎತುಂಗಭದ್ರ ನದಿಯಲ್ಲಿ ನದಿಹರಳಳ್ಳಿ ಗ್ರಾಮದ ಇಬ್ಬರು ಮಕ್ಕಳು ಈಜಲು ಹೋಗಿ ಮೃತಪಟ್ಟ ಸ್ಥಳ. | Kannada Prabha

ಸಾರಾಂಶ

ತುಂಗಭದ್ರಾ ನದಿಯಲ್ಲಿನ ಮರಳುಗಾರಿಕೆಯಿಂದ ನಿರ್ಮಾಣವಾಗಿರುವ ಬೃಹತ್ ಗಾತ್ರದ ಗುಂಡಿಯಲ್ಲಿ ನದಿಹರಳಳ್ಳಿ ಗ್ರಾಮದ ಇಬ್ಬರು ಮಕ್ಕಳು ಈಜಲು ಹೋಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಹರಿಹರ ತಾಲೂಕಿನಲ್ಲಿ ಸಂಭವಿಸಿದೆ. ರಾಣೇಬೆನ್ನೂರು ತಾಲೂಕಿನ ನದಿಹರಳಳ್ಳಿ ಗ್ರಾಮದ ಮಂಜನಾಥ್ ಮತ್ತು ರೇಖಾ ದಂಪತಿ ಮಕ್ಕಳಾದ ನಾಗರಾಜ್ (೧೨), ಬಸವರಾಜ್ (೯) ಮೃತರು.

ಕನ್ನಡಪ್ರಭ ವಾರ್ತೆ ಹರಿಹರ

ತುಂಗಭದ್ರಾ ನದಿಯಲ್ಲಿನ ಮರಳುಗಾರಿಕೆಯಿಂದ ನಿರ್ಮಾಣವಾಗಿರುವ ಬೃಹತ್ ಗಾತ್ರದ ಗುಂಡಿಯಲ್ಲಿ ನದಿಹರಳಳ್ಳಿ ಗ್ರಾಮದ ಇಬ್ಬರು ಮಕ್ಕಳು ಈಜಲು ಹೋಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ರಾಣೇಬೆನ್ನೂರು ತಾಲೂಕಿನ ನದಿಹರಳಳ್ಳಿ ಗ್ರಾಮದ ಮಂಜನಾಥ್ ಮತ್ತು ರೇಖಾ ದಂಪತಿ ಮಕ್ಕಳಾದ ನಾಗರಾಜ್ (೧೨), ಬಸವರಾಜ್ (೯) ಮೃತರು. ಭಾನುವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದರು. ಆಗ ಅಕ್ರಮ ಮರಳುಗಾರಿಕೆಯಿಂದ ನಿರ್ಮಾಣವಾಗಿದ್ದ ಗುಂಡಿಯಲ್ಲಿ ಸಿಲುಕಿ, ಹೊರಬರದಂತಾಗಿ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮೂರು ಮಕ್ಕಳು ಈಜಾಡುತ್ತಿದ್ದರು. ಈ ವೇಳೆ ಇಬ್ಬರು ಮುಳುಗಿರುವ ವಿಷಯ ತಿಳಿದ ಮತ್ತೊಬ್ಬ ಯುವಕ ಊರಿನ ಜನರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ನದಿಹರಳಳ್ಳಿ ಜನರು ಸ್ಥಳಕ್ಕೆ ಆಗಮಿಸಿ ಮುಳುಗಿದ್ದ ಮಕ್ಕಳಿಗೆ ಹುಡುಕಾಟ ನಡೆಸಿದರು. ಭಾನುವಾರ ರಾತ್ರಿ ಮಕ್ಕಳ ಮೃತದೇಹ ಪತ್ತೆಯಾದಾಗ, ಪೋಷಕರು ಆಕ್ರಂದನ ಮುಗಿಲುಮುಟ್ಟಿತ್ತು.

ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದರು. ಮಕ್ಕಳ ಮೃತದೇಹಗಳನ್ನು ನದಿ ಪಾತ್ರದಲ್ಲಿಟ್ಟು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಕುಮಾರಪಟಣಂ ಮತ್ತು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೂ ಪೋಷಕರು ಹಾಗೂ ಗ್ರಾಮಸ್ಥರು ಮಕ್ಕಳ ದೇಹವನ್ನು ಗುತ್ತೂರಿನ ನದಿಯ ದಡದಲ್ಲಿಟ್ಟು ಪ್ರತಿಭಟಿಸಿದ್ದರು. ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಅಕ್ರಮ ಮರಳುಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಪಟ್ಟುಹಿಡಿದು ಪ್ರತಿಭಟಸಿದರು.

ಬೆಳಗ್ಗೆ ಬೆರಳೆಣಿಕೆಯಷ್ಟಿದ್ದ ಸಾರ್ವಜನಿಕರು ಸಮಯ ಕಳೆದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡರು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ವಿಷಯವನ್ನು ತಾಲೂಕು ಆಡಳಿತ ಗಮನಕ್ಕೆ ತಂದರು. ಆಗ ತಹಸೀಲ್ದಾರ್ ಸಹ ಸ್ಥಳಕ್ಕೆ ಭೇಟಿ ನೀಡಿ, ಮೃತ ಬಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ಭರವಸೆ ನೀಡಿದರು. ಬಳಿಕ ಪೋಷಕರು, ಗ್ರಾಮಸ್ಥರು ಮುಂದಿನ ಕಾರ್ಯಕ್ಕೆ ಸಹಕರಿಸಿದರು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - - -೨೫ ಎಚ್‌ಆರ್‌ಆರ್ ೧:

ಮೃತ ಮಕ್ಕಳ ದೇಹವನ್ನು ಗುತ್ತೂರಿನ ನದಿ ದಡದಲ್ಲಿಟ್ಟು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟಸಿದರು. -೨೫ಎಚ್‌ಆರ್‌ಆರ್೧ಎ:

ತುಂಗಭದ್ರಾ ನದಿಯಲ್ಲಿ ನದಿಹರಳಳ್ಳಿ ಗ್ರಾಮದ ಇಬ್ಬರು ಮಕ್ಕಳು ಈಜಲು ಹೋಗಿ ಮೃತಪಟ್ಟ ಸ್ಥಳ.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!