ಇಂದಿನಿಂದ ಎರಡು ದಿನಗಳ ಸಿಎಂ ಜಿಲ್ಲಾ ಪ್ರವಾಸ

KannadaprabhaNewsNetwork |  
Published : Oct 04, 2024, 01:09 AM IST
03ಕೆಪಿಆರ್‌ಸಿಆರ್ 03 | Kannada Prabha

ಸಾರಾಂಶ

ರಾಯಚೂರು ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ನಿತೀಶ ಕೆ. ವಿಭಾಗ ಮಟ್ಟದ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯಲ್ಲಿ ಅ.4 ಹಾಗೂ 5 ರಂದು ಮೂರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿವಿಧ ಸಚಿವರು ಆಗಮಿಸುತ್ತಿದ್ದು, ಅ.4 ಶುಕ್ರವಾರ ಸಿಂಧನೂರಿನಲ್ಲಿ ದಸರಾ ಉತ್ಸವ-2024 ಕಾರ್ಯಕ್ರಮ ಆಯೋಜಿಸಿದ್ದು, ಅ.5ಕ್ಕೆ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟದ ಕುರಿತು ವಿಭಾಗೀಯ ಸಮಾವೇಶ ಹಾಗೂ ಮಾನ್ವಿಯಲ್ಲಿ 1,600 ಕೋಟಿ ವೆಚ್ಚದ ಉನ್ನತೀಕರಿಸಿದ ಚತುಷ್ಪಥ ರಸ್ತೆ ಕಾಮಗಾರಿಗೆ ಸಿಎಂ ಭೂಮಿ ಪೂಜೆ ನೆರವೇರಿಸುವರು ಎಂದು ಜಿಲ್ಲಾಧಿಕಾರಿ ನಿತೀಶ ಕೆ.ತಿಳಿಸಿದರು.

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.4ರಂದು ಶುಕ್ರವಾರ ಮೈಸೂರು ದಸರಾ ಮಾದರಿಯಲ್ಲಿ ಸಿಂಧನೂರು ದಸರಾ ಆಯೋಜಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನಿಡಲಿದ್ದಾರೆ. ಅಂದು ರಾತ್ರಿ ರಾಯಚೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ದಸರಾ ಉತ್ಸವದಲ್ಲಿ ಯುವ ದಸರಾ, ರೈತ ದಸರಾ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊನೆ ದಿನದ ಕಾರ್ಯಕ್ರಮದಲ್ಲಿ ಆನೆ ಮೆರವಣಿಗೆ ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅ.5 ಶನಿವಾರ ಬೆಳಗ್ಗೆ 10 ಗಂಟೆಗೆ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದಿಂದ ಗೋಕಾಕ್ ಚಳುವಳಿಯ ಹಿನ್ನೋಟ-ಮುನ್ನೋಟ ಕುರಿತು ಹಮ್ಮಿಕೊಂಡಿರುವ ವಿಭಾಗೀಯ ಸಮಾವೇಶವನ್ನು ಉದ್ಘಾಟಿಸುವರು. ಅಂದು ಬೆಳಗ್ಗೆ 8ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ಕೃಷಿ ವಿವಿವರೆಗೂ ರಾಜ್ಯದ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚು ಕಲಾ ತಂಡಗಳು ಆಗಮಿಸಲಿದ್ದು, ಮೆರವಣಿಗೆ ಕಾರ್ಯಕ್ರಮ ಆಯೋಜಿಸಿದ್ದು, ಮೆರವಣಿಗೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು.

ಡಿಸಿಎಂ ಡಿ.ಕೆ.ಶಿವಕುಮಾರ್ ಆಶಯ ನುಡಿ ಆಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಪಾಲ್ಗೊಳ್ಳುವರು. ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಸಿಂಧನೂರು ನಗರದಿಂದ ಕಲ್ಮಲಾ ಜಂಕ್ಷನ್‌ವರೆಗೆ ₹1,635 ಕೋಟಿ ವೆಚ್ಚದ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಗೊರೆಬಾಳ ಕ್ಯಾಂಪ್‌ನಿಂದ ಗಾಂಧಿನಗರ ರಸ್ತೆ ನಿರ್ಮಾಣ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯನವರು ಗುದ್ದಲಿ ಪೂಜೆ ನೆರವೇರಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾತನಾಡಿ, ಸಿಎಂ ಆಗಮನ ಹಿನ್ನೆಲೆಯಲ್ಲಿ ಸಿಂಧನೂರು, ರಾಯಚೂರು ಹಾಗೂ ಮಾನ್ವಿ ಮಾರ್ಗಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದು, ಸಿಂಧನೂರಿನಲ್ಲಿ 14, ರಾಯಚೂರಿನಲ್ಲಿ 19 ಹಾಗೂ ಮಾನ್ವಿಯಲ್ಲಿ 11 ಸೇರಿ ಒಟ್ಟು 44 ಸೆಕ್ಟರ್‌ಗಳ ಮೂಲಕ ಬಂದೋಬಸ್ತ್ ಕಲ್ಪಿಸಲಾಗಿದೆ. ಮೂವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 13 ಡಿವೈಎಸ್‌ಪಿಗಳು, 55 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 140 ಸಬ್ ಇನ್ಸ್‌ಪೆಕ್ಟರ್‌ಗಳು, 300 ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್‌ಗಳು, 1,700 ಪೇದೆಗಳು, 200 ಮಹಿಳಾ ಪೇದೆಗಳು, 15 ಡಿಎಆರ್, 5 ಕೆಎಸ್ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ದಲಿತ ಸಂಘಟನೆಗಳ ಮುಖಂಡರು ಸಿಎಂ, ಡಿಸಿಎಂಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದು, ಅವರ ಜತೆ ಮಾತುಕತೆ ನಡೆಸಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ