ಇಂದಿನಿಂದ ಎರಡು ದಿನ ಪದವಿ ಕಾಲೇಜುಗಳ ಕ್ರೀಡಾಕೂಟ: ಚಲುವಯ್ಯ

KannadaprabhaNewsNetwork | Published : Oct 25, 2024 12:49 AM

ಸಾರಾಂಶ

ಎರಡು ದಿನಗಳ ಮಂಡ್ಯ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಹಾಗೂ ವಾಲಿಬಾಲ್, ಖೋಖೋ, ಕಬಡ್ಡಿ, ಟೆನ್ನಿಕಾಯ್ಟ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಜಯಂತಿನಗರ ಬಳಿಯ ಎಸ್‌ಎಸ್ ಇಟಿ ಕ್ರೀಡಾಂಗಣದಲ್ಲಿ ಅ.25 ಮತ್ತು 26ರಂದು ಎರಡು ದಿನಗಳ ಕಾಲ ಮಂಡ್ಯ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಚಲುವಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಶಂಭುಲಿಂಗೇಶ್ವರ ಎಜುಕೇಶನ್ ಟ್ರಸ್ಟ್, ಶ್ರೀಶಂಭುಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಹಾಗೂ ಹಲವು ಕ್ರೀಡೆಗಳು ನಡೆಯಲಿವೆ. ನವೆಂಬರ್ 20, 21ರಂದು ಎಸ್‌ಎಸ್ ಇಟಿ ಕ್ರೀಡಾಂಗಣದಲ್ಲಿಯೇ ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಂಚಲಿಂಗೇಗೌಡ ಮಾತನಾಡಿ, ಎರಡು ದಿನಗಳ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಹಾಗೂ ವಾಲಿಬಾಲ್, ಖೋಖೋ, ಕಬಡ್ಡಿ, ಟೆನ್ನಿಕಾಯ್ಟ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳು ನಡೆಯಲಿವೆ ಎಂದರು

ಕ್ರೀಡಾ ಧ್ವಜಾರೋಹಣವನ್ನು ಅಂದು ಬೆಳಗ್ಗೆ 9ಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸಲಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು, ಕ್ರೀಡಾಕೂಟವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಡಾ.ಕೆ.ಎಸ್.ರಾಜಣ್ಣ ಉದ್ಘಾಟಿಸಲಿದ್ದಾರೆ ಎಂದರು.

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಘನ ಉಪಸ್ಥಿತಿ ಇರಲಿದ್ದು, ಜಿಲ್ಲೆಯ ಶಾಸಕರು, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಎಸ್.ಸಂತೋಷ್, ಕ್ರೀಡಾಕೂಟದ ನೋಡಲ್ ಅಧಿಕಾರಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಶ್ರೀ ಶಂಭುಲಿಂಗೇಶ್ವರ ಎಜುಕೇಶನ್ ನ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪಿ.ಅಕ್ಷಯ್, ಕ್ರೀಡಾಕೂಟದ ನೋಡಲ್ ಅಧಿಕಾರಿ ಎಚ್.ಎಸ್.ಲಕ್ಷ್ಮೀನಾರಾಯಣ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಎನ್.ರಾಮಕೃಷ್ಣೇಗೌಡ, ಎಸ್ ಎಸ್ ಪಿಯು ಕಾಲೇಜು ಪ್ರಾಂಶುಪಾಲೆ ಆರ್.ವಿ.ಸೌಮ್ಯ, ಕ್ರೀಡಾಕೂಟದ ಸಂಯೋಜಕ ಎಸ್.ಎಂ.ಗುರುಸ್ವಾಮಿ ಇತರರಿದ್ದರು.

Share this article