ನದಿ ಮರಳು ಗುಂಡಿಯಲ್ಲಿ ಮುಳುಗಿ ಇಬ್ಬರ ದುರ್ಮರಣ: ದೂರು ದಾಖಲು

KannadaprabhaNewsNetwork |  
Published : Nov 06, 2024, 12:57 AM IST
05 ಎಚ್‍ಆರ್‍ಆರ್ 01ಹರಿಹರ ಸಮೀಪದ ಗುತ್ತೂರು ಬಳಿ ನದಿ ಪಾತ್ರಕ್ಕೆ ಗಣಿ ಇಲಾಖೆ ಭೂ ವಿಜ್ಞಾನಿ ಎಸ್. ಕವಿತಾ ಭೇಟಿ ನೀಡಿ ಸಂತ್ರಸ್ಥರ ಹಾಗೂ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ಹರಿಹರ ಸಮೀಪದ ಗುತ್ತೂರು ಬಳಿ ನದಿ ಪಾತ್ರಕ್ಕೆ ಗಣಿ ಇಲಾಖೆ ಭೂ ವಿಜ್ಞಾನಿ ಎಸ್. ಕವಿತಾ ಭೇಟಿ ನೀಡಿ ಸಂತ್ರಸ್ಥರ ಹಾಗೂ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಹೊರವಲಯದ ಗುತ್ತೂರಿನ ನದಿಯಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ಟ್ರ್ಯಾಕ್ಟರ್ ತೊಳೆಯುವಾಗ ಮರಳಿನ ಗುಂಡಿಯಲ್ಲಿ ಮುಳುಗಿ ಇಬ್ಬರು ಮರಣ ಹೊಂದಿದ್ದ ಅ.31ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಕುಟುಂಬದವರೊಬ್ಬರು ಗ್ರಾಮದ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿವರ: ಮೃತರಾದ ಅಣ್ಣಪ್ಪ ಗಿಡ್ಡಬಸಪ್ಪರ್‌ ಅಣ್ಣ ಹಾಗೂ ಬಾಲಕ ಪ್ರಶಾಂತ್ ಗಿಡ್ಡಬಸಪ್ಪರ್ ಅವರ ತಂದೆಯಾದ ಪ್ರಕಾಶ್ ಗಿಡ್ಡಪ್ಪನವರ್ ಸೋಮವಾರ ಇಲ್ಲಿನ ಗ್ರಾಮಾಂತರ ವೃತ್ತ ಆರಕ್ಷಕ ನಿರೀಕ್ಷಕ ಸುರೇಶ್ ಸಗರಿಯವರಿಗೆ ದೂರು ನೀಡಿದ್ದರು.

ಗ್ರಾಮದ ಸಮೀಪದ ನದಿ ಪಾತ್ರದಲ್ಲಿ ಗ್ರಾಮದ ಎ.ಪಿ.ಆನಂದ್ ಮತ್ತು ಆರ್.ಬಿ.ರವಿ ಎಂಬುವರು ಮರಳು ಗಣಿಗಾರಿಕೆಗಾಗಿ ಆಳವಾದ ಗುಂಡಿ ಮಾಡಿಸಿದ್ದರು. ನನ್ನ ಸಹೋದರ ಮತ್ತು ಪುತ್ರನ ಸಾವು ಅದೇ ಗುಂಡಿಯಲ್ಲಿ ಮುಳುಗಿ ಆಗಿರುವುದರಿಂದ ಅವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಕುಟುಂಬದವರಿಗೆ ರಕ್ಷಣೆ ನೀಡಬೇಕು ಎಂದು ಕೋರಿದ್ದರು.

ಗಣಿ ಅಧಿಕಾರಿ ಭೇಟಿ: ಸಂತ್ರಸ್ಥರ ಕುಟುಂಬದವರು ಹಾಗೂ ಕೆಲವು ಗ್ರಾಮಸ್ಥರ ಆಗ್ರಹದ ಮೇರೆಗೆ ಗಣಿ ಇಲಾಖೆಯ ಭೂ ವಿಜ್ಞಾನಿ ಎಸ್.ಕವಿತಾ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದಾಗ, ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಯಿಂದ ಸೃಷ್ಟಿಯಾಗಿರುವ ಆಳವಾದ ಗುಂಡಿಗಳನ್ನು ಅಧಿಕಾರಿಗಳಿಗೆ ಸಂತ್ರಸ್ಥರ ಕುಟುಂಬದ ಹಾಗೂ ಗ್ರಾಮಸ್ಥರು ಅಕ್ರಮ ಮರಳು ಗಣಿಗಾರಿಕೆಯಿಂದ ಇಲ್ಲಿ ಸೃಷ್ಟಿಯಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಕವಿತಾ, ಗುತ್ತೂರು ಪ್ರದೇಶದ ನದಿ ದಡದಲ್ಲಿ ಮರಳು ಗಣಿಗಾರಿಕೆಯ ಅಧಿಕೃತ ಪಾಯಿಂಟ್ ಇಲ್ಲ. ಆದರೂ ಇಲ್ಲಿ ಮರಳುಗಾರಿಕೆ ನಡೆದಿರುವ ಕುರುಹುಗಳಿವೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ತಾಲೂಕು ಮಟ್ಟದ ಮರಳು ಕಾರ್ಯಪಡೆ ಸಭೆ ಕರೆಯಲಾಗುವುದು ಎಂದು ಹೇಳಿದರು.

ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಮರಳುಗಾರಿಕೆಯಿಂದ ಸೃಷ್ಟಿಯಾಗಿರುವ ಗುಂಡಿಗಳಿರುವ ಪ್ರದೇಶದಲ್ಲಿ ಎಚ್ಚರಿಕೆಯ ನಾಮಫಲಕಗಳನ್ನು ಅಳವಡಿಸುವುದು ಅಕ್ರಮ ಮರಳು ಗಾಣಿಗಾರಿಕೆ ತಡೆಯಲು ರಾತ್ರಿ ಗಸ್ತು ಜಾರಿ ಮಾಡುವುದು ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲಾಗುವುದು. ಮರಳು ಗಣಿಗಾರಿಕೆ ಕಾರ್ಯಪಡೆಯಲ್ಲಿ ಗಣಿ, ಪೊಲೀಸ್, ಕಂದಾಯ, ಪರಿಸರ, ಲೋಕೋಪಯೋಗಿ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಗ್ರಾಮಾಂತರ ಸಿಪಿಐ ಸುರೇಶ್ ಸಗರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ