ಭಟ್ಕಳ:
ಮುರ್ಡೇಶ್ವರ ಸಮುದ್ರದಲ್ಲಿ ಈಜಲಿಳಿದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದರೆ, ಮತ್ತಿಬ್ಬರು ಅಲೆಗಳ ಅಬ್ಬರ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಬಾಗಲಕೋಟೆ ಜಿಲ್ಲೆಯ ಬಸವನಗೌಡ ಪಾಟೀಲ್ (೨೨), ಶರಣು ಇಂಚಲ್ (೨೧), ರವಿಚಂದ್ರ (೨೨) ಎನ್ನುವವರು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಲೈಫ್‌ಗಾರ್ಡಗಳು ಅವರ ಜೀವ ರಕ್ಷಣೆ ಮಾಡಿ ಮೇಲಕ್ಕೆ ತಂದಿದ್ದರು.
ಈ ಘಟನೆ ಆದ ನಂತರ ಬಾಗಲಕೋಟೆಯಿಂದ ಪ್ರವಾಸಕ್ಕೆ ಬಂದಿದ್ದ ಎರಡು ಪ್ರತ್ಯೇಕ ಪ್ರವಾಸಿಗಳ ಗುಂಪುಗಳಲ್ಲಿ ನೀರಬೂದಿಹಾಳದ ಮಂಜುನಾಥ ರಮೇಶ ಹಡಪದ (೨೫) ಹಾಗೂ ಲೋಕಾಪುರ ನಿವಾಸಿ ಕೃಷ್ಣಪ್ಪ ಕರಿಯಪ್ಪ ಹರಕಂಗಿ (೧೮) ನೀರು ಪಾಲಾಗಿ ಸಾವನ್ನಪ್ಪಿದ್ದಾರೆ.ಸೋಮವಾರ ಬೆಳಗ್ಗೆ ಎರಡೂ ಗುಂಪಿನವರು ಸಮುದ್ರದಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ವೇಳೆ ಈ ಘಟನೆ ಜರುಗಿದೆ. ಸ್ಥಳೀಯ ಮೀನುಗಾರರ ಪ್ರಯತ್ನದಿಂದ ಇಬ್ಬರ ಮೃತದೇಹ ಸಮುದ್ರದ ಅಲೆಯ ನಡುವೆ ದೊರೆತಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಈ ಕುರಿತು ಮಂಜುನಾಥ ತಾಯಿ ಕಸ್ತೂರಿ ಹಡಪದ ಮತ್ತು ಕೃಷ್ಣಪ್ಪ ಹರಕಂಗಿ ಈತನ ಸ್ನೇಹಿತ ಪ್ರಶಾಂತ ಚೆನ್ನಯ್ಯ ಕಡ್ಲಿಮಠ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮುರ್ಡೇಶ್ವರ ಸಮುದ್ರದಲ್ಲಿ ಪ್ರವಾಸಿಗರು ಸ್ಥಳೀಯ ಮೀನುಗಾರರು, ಪೊಲೀಸರು, ಲೈಫ್ ಗಾರ್ಡಗಳು ಸಮುದ್ರದ ಅಪಾಯದ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಿದ್ದರೂ ಸಹ ಅವರ ಮಾತನ್ನು ಕೇಳದೇ ಈಜಲಿಳಿದು ನೀರುಪಾಲಾಗುತ್ತಿದ್ದಾರೆ.