ಕೋಳಿ ಪುಕ್ಕದ ಸ್ಫೋಟಕ್ಕೆ ಎರಡು ಶ್ವಾನ ಬಲಿ!

KannadaprabhaNewsNetwork |  
Published : Jun 23, 2026, 01:30 AM IST
22ಕೆಡಿವಿಜಿ9-ಚನ್ನಗಿರಿ ತಾ. ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೋಳಿ, ಮಾಂಸದೊಳಗೆ ಸ್ಪೋಟಕವನ್ನು ಕಟ್ಟಿಟ್ಟಿದ್ದ ಸ್ಥಳದಲ್ಲಿ ಅದನ್ನು ಕಚ್ಚಿಕೊಂಡು ಓಡಿದ ನಾಯಿ ಬಾಯಿಯಲ್ಲೇ ಸ್ಪೋಟವಾಗಿ ಸಾವನ್ನಪ್ಪಿರುವುದು. ..................22ಕೆಡಿವಿಜಿ10, 11, 12,-ಚನ್ನಗಿರಿ ತಾ. ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೋಳಿ, ಮಾಂಸದೊಳಗೆ ಸ್ಪೋಟಕ ಕಟ್ಟಿಟ್ಟಿದ್ದ ಸ್ಥಳದಲ್ಲಿ ನಾಯಿ ಬಾಯಲ್ಲೇ ಸ್ಪೋಟವಾಗಿದ್ದ ಸ್ಥಳದಲ್ಲಿ ಬಿದ್ದಿರುವ ಕೋಳಿ ಪುಕ್ಕ, ಕೋಳಿ ಮಾಂಸ, ನಾಯಿ ಬಾಯಿಯ ಭಾಗಗಳು, ಸ್ಪೋಟಕದ ಪುಡಿಗಳು. | Kannada Prabha

ಸಾರಾಂಶ

ಕೋಳಿ ಪುಕ್ಕಗಳಲ್ಲಿ ಸ್ಫೋಟಕವನ್ನಿಟ್ಟು, ಅದರ ಸುತ್ತಲೂ ಮಾಂಸ ಕಟ್ಟಿಟ್ಟಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಂಸದ ಆಸೆಗೆ ಕೋಳಿ ಪುಕ್ಕಗಳಿದ್ದ ಸ್ಫೋಟಕಗಳನ್ನು ಕಚ್ಚಿದ ಎರಡು ನಾಯಿಗಳ ಬಾಯಿಯಲ್ಲೇ ಸ್ಫೋಟ ಸಂಭವಿಸಿ, ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ವರದಿಯಾಗಿದೆ.

- ಪುಕ್ಕದೊಳಗೆ ಸ್ಫೋಟಕವಿಟ್ಟಿದ್ದ ಕಿಡಿಗೇಡಿಗಳು । ಹಿರೇಕೋಗಲೂರು, ನಲ್ಕುದುರೆಯಲ್ಲಿ ಘಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೋಳಿ ಪುಕ್ಕಗಳಲ್ಲಿ ಸ್ಫೋಟಕವನ್ನಿಟ್ಟು, ಅದರ ಸುತ್ತಲೂ ಮಾಂಸ ಕಟ್ಟಿಟ್ಟಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಂಸದ ಆಸೆಗೆ ಕೋಳಿ ಪುಕ್ಕಗಳಿದ್ದ ಸ್ಫೋಟಕಗಳನ್ನು ಕಚ್ಚಿದ ಎರಡು ನಾಯಿಗಳ ಬಾಯಿಯಲ್ಲೇ ಸ್ಫೋಟ ಸಂಭವಿಸಿ, ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ವರದಿಯಾಗಿದೆ.

ಚನ್ನಗಿರಿ ಹಿರೇಕೋಗಲೂರು ಹಾಗೂ ನಲ್ಕುದುರೆ ಗ್ರಾಮಗಳಲ್ಲಿ ಸಂಭವಿಸಿದ ಕೋಳಿ ಪುಕ್ಕಗಳಲ್ಲಿಟ್ಟ ಸ್ಫೋಟಕ ಸ್ಫೋಟದಲ್ಲಿ ಎರಡು ನಾಯಿಗಳು ಬಲಿಯಾಗಿವೆ. ಯಾರು, ಯಾವ ಕಾರಣಕ್ಕೆ ಕೋಳಿ ಪುಕ್ಕ ಹಾಗೂ ಮಾಂಸದೊಳಗೆ ಜಿಲಿಟಿನ್ ಅಥವಾ ಯಾವುದೋ ಸ್ಫೋಟಕವನ್ನು ಇಟ್ಟಿದ್ದರೆಂಬುದು ಈಗ ಪೊಲೀಸ್ ಇಲಾಖೆಗೂ ತಲೆನೋವಾಗಿದೆ.

ನಲ್ಕುದುರೆ ಗ್ರಾಮದ ನವಿಲೇಹಾಳು- ಆಲೂರು ರಸ್ತೆಯಲ್ಲಿ ರೈತರೊಬ್ಬರ ಮನೆಗೆ ಸೇರಿದ ದನ ಹೊಡೆದುಕೊಂಡು ಹೋಗಿದ್ದ ದನಗಳ ಜೊತೆಗೆ ಹೋಗಿದ್ದ ಸಾಕುನಾಯಿ ಅಲ್ಲಿಯೇ ಬಿದ್ದಿದ್ದ ಮಾಂಸ, ಕೋಳಿ ಪುಕ್ಕಗಳನ್ನು ಕಂಡು ಮೂಸಿ ನೋಡಿದೆ. ಮಾಂಸವನ್ನು ಕಚ್ಚುತ್ತಿದ್ದಂತೆಯೇ ಸ್ಫೋಟಕವಿದ್ದ ಕೋಳಿಪುಕ್ಕದಲ್ಲಿದ್ದ ಮಾಂಸ ನಾಯಿಯ ಬಾಯಿಯಲ್ಲಿದ್ದಾಗಲೇ ಸ್ಫೋಟಗೊಂಡು, ನಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದೆ.

ಅತ್ತ ಹಿರೇಕೋಗಲೂರು ಗ್ರಾಮದಲ್ಲೂ ಇಂತಹದ್ದೇ ಪ್ರಕರಣ ನಡೆದಿದೆ. ನಾಯಿಯೊಂದು ಮಾಂಸ ಮೆತ್ತಿದ್ದ ಸ್ಫೋಟಕವನ್ನು ಕಚ್ಚಿಕೊಂಡು, ತನ್ನನ್ನು ಸಾಕಿದ್ದ ಮನೆಯ ಬಾಲಕನ ಕಡೆಗೆ ಬರುತ್ತಿದ್ದ ವೇಳೆಯೇ ಸ್ಫೋಟಗೊಂಡು ನಾಯಿ ಅಸುನೀಗಿದೆ. ಎರಡೂ ಪ್ರಕರಣಗಳಲ್ಲಿ ಕೋಳಿಪುಕ್ಕಗಳ ಮಧ್ಯೆ ಸ್ಫೋಟಕವನ್ನು ಇಟ್ಟು, ಅದರ ಮೇಲೆಲ್ಲಾ ಮಾಂಸ ಮೆತ್ತಿ ಬಿಸಾಕಿದ್ದು ಕಿಡಿಗೇಡಿಗಳ ಕೃತ್ಯವೋ ಅಥವಾ ಯಾರಾದರೂ ವಿಧ್ವಂಸಕ ಕೃತ್ಯಕ್ಕೆ ಇಂತಹದ್ದೊಂದು ಪ್ರಯೋಗ ಮಾಡಿದ್ದಾರಾ ಎಂಬ ಆತಂಕ ಗ್ರಾಮಸ್ಥರಲ್ಲೂ ತೀವ್ರವಾಗಿ ಕಾಡುತ್ತಿದೆ.

ಗುಡ್ಡಗಾಡು ಪ್ರದೇಶಗಳಲ್ಲಿ ಕಾಡುಹಂದಿಗಳನ್ನು, ಮೀನುಗಳ ಹಿಡಿಯಲು ಹೀಗೆ ಕೋಳಿ ಪುಕ್ಕಗಳಿಗೆ ಸ್ಫೋಟಕವಿಟ್ಟು, ಅದರ ಮೇಲೆ ಮಾಂಸ ಮೆತ್ತಿ, ಬಿಗಿಯಾಗಿ ಕಟ್ಟಿರುತ್ತಾರೆ ಎನ್ನಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಚನ್ನಗಿರಿ ತಾಲೂಕಿನಲ್ಲಿ ಹೀಗೆ ಸ್ಫೋಟಕಗಳು ಪ್ರತ್ಯೇಕ ಕಡೆಗಳಲ್ಲಿ ಪತ್ತೆಯಾಗಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ನೂಕಿದೆ.

ಘಟನಾ ಸ್ಥಳಗಳಿಗೆ ಸಂತೇಬೆನ್ನೂರು ಪೊಲೀಸ್ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳದಲ್ಲಿದ್ದ ಎಲ್ಲ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸಂಗ್ರಹಿಸಿದ್ದು, ಅಲ್ಲಿ ಬಿದ್ದಿದ್ದ ಮಾದರಿಗಳನ್ನು ಕಲೆ ಹಾಕಿ, ಪರೀಕ್ಷೆಗೆ ಮುಂದಾಗಿದ್ದಾರೆ.

- - -

-22ಕೆಡಿವಿಜಿ9: ನಾಯಿ ಬಾಯಿಯಲ್ಲಿಯೇ ಸ್ಫೋಟ ಸಂಭವಿಸಿ ಸಾವನ್ನಪ್ಪಿರುವುದು.

-22ಕೆಡಿವಿಜಿ10, 11, 12: ನಾಯಿ ಬಾಯಲ್ಲೇ ಸ್ಫೋಟವಾಗಿದ್ದ ಸ್ಥಳದಲ್ಲಿ ಬಿದ್ದಿರುವ ಕೋಳಿಪುಕ್ಕ, ಕೋಳಿ ಮಾಂಸ, ನಾಯಿ ಬಾಯಿಯ ಭಾಗಗಳು, ಸ್ಫೋಟಕದ ಪುಡಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪಾರದರ್ಶಕವಾಗಿರಲಿ
ಮೌಲ್ಯಾಧಾರಿತ ಶಿಕ್ಷಣ ಶಾಲಾ ಕಾಲೇಜುಗಳ ಧ್ಯೇಯವಾಗಬೇಕು