- ಸ್ವಚ್ಛತೆ ಜಾಗೃತಿಗೂ ಕಿವಿಗೊಡದ ಜನರಿಗೆ ಇನ್ನು ದಂಡ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ - - -
ದಾವಣಗೆರೆ ಮಹಾನಗರದ ಸ್ವಚ್ಛತೆಗೆ ಭಂಗ ತರುತ್ತಿರುವವರು, ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವ ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಿ, ಕಸ ಸುರಿಯುವವರ ವಿರುದ್ಧ ಇನ್ನು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಸ್ವಚ್ಛತೆಯನ್ನು ನಾಗರೀಕರು ಹಾಳು ಮಾಡಬಾರದು. ಆದರೆ, ರಸ್ತೆ ಬದಿ, ಖಾಲಿ ಜಾಗ, ತಿರುವುಗಳು, ರಸ್ತೆಗಳ ಮೂಲೆಗಳಲ್ಲಿ, ಚರಂಡಿಗಳ ಪಕ್ಕ, ಚರಂಡಿಗಳಲ್ಲಿ ಕಸ ಸುರಿಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಈಗಾಗಲೇ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.ಪಾಲಿಕೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಆದರೂ, ಕೆಲವರು ತಿದ್ದಿಕೊಂಡಿಲ್ಲ. ಮನೆಯ ಮುಂದೆ ಬರುವ ತ್ಯಾಜ್ಯ ಸಂಗ್ರಹಿಸುವ ಕಸದ ಗಾಡಿಗಳಿಗೆ ಹಸಿ ಕಸ, ಒಣ ಕಸ ಬೇರ್ಪಡಿಸಿ ಹಾಕುವಂತೆಯೂ ನಿತ್ಯವೂ ಹೇಳಲಾಗುತ್ತದೆ. ಸೂಚನೆ ಉಲ್ಲಂಘಿಸಿದರೆ ಕ್ರಮ ತಪ್ಪಿದ್ದಲ್ಲ ಎಂದರು.
ಮೊದಲ ಹಂತದಲ್ಲಿ ದಂಡ ಮತ್ತು ಫೋಟೋ ಪ್ರಕಟಿಸಿದ ನಂತರವೂ ಸುಧಾರಿಸದಿದ್ದರೆ ಮುಂದಿನ ಹಂತವಾಗಿ ಅಂತಹವರು ಎಲ್ಲೆಲ್ಲಿ ಕಸ ಹಾಕಿದ್ದಾರೋ, ಅದೇ ಕಸವನ್ನು ತಂದು ಕಸ ಸುರಿದವರ ಮನೆ ಅಂಗಳಕ್ಕೆ ಸುರಿಯಲು ನಿರ್ಧರಿಸಲಾಗಿದೆ. ನಿಯಮ ಉಲ್ಲಂಘಿಸುವವರ ಸೈಟ್ ಅಥವಾ ಮನೆಗೆ ದುಪ್ಪಟ್ಟು ತೆರಿಗೆ ವಿಧಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
(ಬಾಕ್ಸ್)
ಈ ಬಾರಿ ಮಳೆ ಕೈಕೊಟ್ಟಿದ್ದು, ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆ ಅವಲಂಬನೆ ಆಗಿರುವುದೇ ಭದ್ರಾ ನಾಲೆಗಳ ಮೇಲೆ. ಹಾಗಾಗಿ, ನೀರಿನ ಮಿತ ಬಳಕೆಗೆ ಜನ ಮುಂದಾಗಬೇಕು. ನಿತ್ಯವೂ ವಾಹನಗಳನ್ನು ತೊಳೆಯಲೆಂದು ನೀರು ವ್ಯರ್ಥ ಮಾಡಬೇಡಿ. ತಮ್ಮ ಕೊಳವೆ ಬಾವಿ ಇದೆಯೆಂದು ಹೇಳಿ, ಉಡಾಫೆಯಿಂದ ವರ್ತಿಸುವವರೂ ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ನೀರು ವ್ಯರ್ಥವಾಗಿ, ಪೋಲು ಮಾಡುವ ಬದಲು ವಾರಕ್ಕೊಮ್ಮೆ ಮಾತ್ರ ನಿಮ್ಮ ವಾಹನ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ ಎಂದು ತಾಕೀತು ಮಾಡಿದರು.
(ಟಾಪ್ ಕೋಟ್) ದಾವಣಗೆರೆ ನಗರದಲ್ಲಿ ಬೆಳಗಿನ ವೇಳೆ ವಾಹನ ತೊಳೆಯಲು ಹಾಗೂ ಮನೆ ಮುಂದಿನ ರಸ್ತೆಗಳಿಗೆ ಪೈಪ್ ಮೂಲಕ ನೂರಾರು ಲೀಟರ್ ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡುತ್ತಿದ್ದಾರೆ. ಇಂತಹ ಕೃತ್ಯಗಳಿಂದಾಗಿ ಡಾಂಬರು ರಸ್ತೆ ಹಾಳಾಗುತ್ತಿವೆ. ನೀರನ್ನು ಪೋಲು ಮಾಡುವವರ ಮನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಾಲಿಕೆಗೆ ನಿರ್ದೇಶನ ನೀಡಿದ್ದೇವೆ. ಅಂತಹ ಮನೆಗಳಿಗೆ ಭಾರಿ ಮೊತ್ತದ ದಂಡ ವಿಧಿಸುವ ಜೊತೆಗೆ ನೀರಿನ ಸಂಪರ್ಕ ಕಡಿತಗೊಳಿಸಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
- - -