ಚಮನ್‌ ಮೀನು ವಾಸನೆಗೆ ಮತ್ತೆ 2 ಬಲಿ - ಬೋಟ್‌ನಿಂದ ಮೀನು ತೆಗೆವಾಗ ಸಾವು : ಎಚ್ಚರ !

KannadaprabhaNewsNetwork |  
Published : Nov 01, 2026, 03:30 AM IST
chaman Fish

ಸಾರಾಂಶ

ಕೆಲವು ದಿನಗಳ ಹಿಂದಷ್ಟೇ ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿಯೂ ಇದೇ ರೀತಿಯ ವಿಷಗಾಳಿ ದುರಂತ ಸಂಭವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ಮುದಗಾ ಬಂದರಿನಲ್ಲಿನ ಇಬ್ಬರ ಸಾವು ಸೇರಿ ಮೂರು ದಿನಗಳ ಅಂತರದಲ್ಲಿ ಒಟ್ಟು ಐವರು ಮೀನುಗಾರರು ವಿಷಗಾಳಿಗೆ ಬಲಿಯಾದಂತಾಗಿದೆ.

ಕಾರವಾರ: ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ಸ್ವಚ್ಛಗೊಳಿಸುವ ವೇಳೆ ಹೈಡ್ರೋಜನ್ ಸಲ್ಫೈಡ್ ವಿಷಾನಿಲ ಸೇವಿಸಿ ಈರ್ವರು ಕಾರ್ಮಿಕರು ಮೃತಪಟ್ಟಿದ್ದು, ಮೂವರು ಅಸ್ವಸ್ಥರಾದ ಘಟನೆ ಶನಿವಾರ ನಡೆದಿದೆ. ಅಸ್ವಸ್ಥರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅ. 29ರಂದು ಮಲ್ಪೆಯಿಂದ ಕೃಷ್ಣಾ ಎಂಬವರಿಗೆ ಸೇರಿದ ‘ಮೂಕಾಂಬಿಕಾ’ ಹೆಸರಿನ ಮೀನುಗಾರಿಕಾ ಬೋಟ್ 35 ಕಾರ್ಮಿಕರೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಬೋಟ್‌ನಲ್ಲಿ ತಾರ್ಲೆ ಹಾಗೂ ಚಮನ್ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆತಿದ್ದವು. ಮೀನುಗಳು ಹಾಳಾಗುವ ಸಾಧ್ಯತೆಯಿದ್ದಿದ್ದರಿಂದ ಮಲ್ಪೆಗೆ ಮರಳುವ ಬದಲು ಕಾರವಾರದ ಮುದಗಾ ಬಂದರಿಗೆ ತಂದು ಮಾರಾಟ ಮಾಡಲು ನಿರ್ಧರಿಸಲಾಗಿತ್ತು.

ಅದರಂತೆ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮೀನುಗಳನ್ನು ಬಂದರಿನಲ್ಲಿ ಇಳಿಸಲಾಗಿತ್ತು.ಬಳಿಕ ಬೋಟ್‌ನ ಸ್ಟೋರೇಜ್ ವಿಭಾಗದಲ್ಲಿದ್ದ ಚಮನ್ ಮೀನಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಐವರು ಕಾರ್ಮಿಕರು ಒಳಗೆ ಇಳಿದಿದ್ದಾರೆ. ಈ ವೇಳೆ ಕೊಳೆತ ಮೀನಿನ ತ್ಯಾಜ್ಯದಿಂದ ಉತ್ಪತ್ತಿಯಾಗಿದ್ದ ಹೈಡ್ರೋಜನ್ ಸಲ್ಫೈಡ್ ಅನಿಲ ಸೇವಿಸಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ಒಡಿಶಾ ಮೂಲದ ಪುರಂಧರ್ ಬಿಸರ(21) ಹಾಗೂ ಆಕಾಶ್ ನಾಯ್ಕ(24) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಡಿಶಾ ಮೂಲದ ಲಾಲಿಂದರ್ ಧ್ರುವ(41) ಸ್ಥಿತಿ ಗಂಭೀರವಾಗಿದ್ದು, ರಾಬುಲ್ ಸೇರಿದಂತೆ ಮತ್ತಿಬ್ಬರು ಕಾರ್ಮಿಕರೂ ಅಸ್ವಸ್ಥರಾಗಿದ್ದಾರೆ. ಮೂವರನ್ನು ತಕ್ಷಣ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.ಸ್ಥಳಕ್ಕೆ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ದೌಡಾಯಿಸಿದ್ದು, ಇನ್‌ಸ್ಪೆಕ್ಟರ್ ವಿನೋದ್ ನೇತೃತ್ವದ 30 ಸದಸ್ಯರ ಎನ್‌ಡಿಆರ್‌ಎಫ್ ತಂಡ ಮಲ್ಟಿ ಡಿಟೆಕ್ಟರ್ ಯಂತ್ರದ ಮೂಲಕ ಬೋಟ್‌ನ ಸ್ಟೋರೇಜ್ ವಿಭಾಗದಲ್ಲಿ ಅನಿಲದ ಸಾಂದ್ರತೆಯನ್ನು ಪರಿಶೀಲಿಸಿತು.

ಹೈಡ್ರೋಜನ್ ಸಲ್ಫೈಡ್ ಅನಿಲದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆ

ಈ ವೇಳೆ ಹೈಡ್ರೋಜನ್ ಸಲ್ಫೈಡ್ ಅನಿಲದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಅಕ್ಕಪಕ್ಕದ ಬೋಟ್‌ಗಳ ಸ್ಟೋರೇಜ್ ವಿಭಾಗಗಳನ್ನೂ ಪರಿಶೀಲಿಸಿದಾಗ ಮೂರು ಬೋಟ್‌ಗಳಲ್ಲಿ ಶೇ. 50ರಷ್ಟು ಅನಿಲದ ಸಾಂದ್ರತೆ ಇರುವುದು ಪತ್ತೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೋಟ್‌ಗಳನ್ನು ಪ್ರತ್ಯೇಕಿಸಿ, ಅನಿಲವನ್ನು ಸುರಕ್ಷಿತವಾಗಿ ಹೊರಹಾಕುವ ಕಾರ್ಯಾಚರಣೆ ನಡೆಸಲಾಯಿತು.

ಬೋಟ್‌ನ ಸ್ಟೋರೇಜ್ ವಿಭಾಗದಲ್ಲಿ ವಿಷ ಅನಿಲದ ಪ್ರಮಾಣ

ಬೋಟ್‌ನ ಸ್ಟೋರೇಜ್ ವಿಭಾಗದಲ್ಲಿ ವಿಷ ಅನಿಲದ ಪ್ರಮಾಣ ಹೆಚ್ಚಾಗಿದ್ದು, ಬಂದರಿನ ಹೊರಭಾಗಕ್ಕೂ ಅನಿಲ ಹರಡುತ್ತಿರುವ ಸಾಧ್ಯತೆಯಿದ್ದ ಹಿನ್ನಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಬೋಟ್ ಅನ್ನು ಪ್ರತ್ಯೇಕವಾಗಿ ಇರಿಸುವಂತೆ ಸೂಚಿಸಿದರು. ಕೆಲವು ದಿನಗಳ ಹಿಂದಷ್ಟೇ ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿಯೂ ಇದೇ ರೀತಿಯ ವಿಷಗಾಳಿ ದುರಂತ ಸಂಭವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ಮುದಗಾ ಬಂದರಿನಲ್ಲಿನ ಇಬ್ಬರ ಸಾವು ಸೇರಿ ಮೂರು ದಿನಗಳ ಅಂತರದಲ್ಲಿ ಒಟ್ಟು ಐವರು ಮೀನುಗಾರರು ವಿಷಗಾಳಿಗೆ ಬಲಿಯಾದಂತಾಗಿದೆ.

ಮೀನಿನ ತ್ಯಾಜ್ಯ ಕೊಳೆಯುವಾಗ ಹೈಡ್ರೋಜನ್ ಸಲ್ಫೈಡ್‌ನಂತಹ ವಿಷಕಾರಿ ಅನಿಲ ಉತ್ಪತ್ತಿಯಾಗುವ ಸಾಧ್ಯತೆಯಿದ್ದು, ಮುಚ್ಚಿದ ಸ್ಟೋರೇಜ್ ವಿಭಾಗಕ್ಕೆ ಇಳಿಯುವುದು ಅಪಾಯಕಾರಿ. ಆದ್ದರಿಂದ ಸ್ಟೋರೇಜ್ ವಿಭಾಗವನ್ನು ತೆರೆದಿಟ್ಟು, ಅನಿಲದ ಸಾಂದ್ರತೆಯನ್ನು ಪರಿಶೀಲಿಸಿ ಸುರಕ್ಷಿತವೆಂದು ಖಚಿತಪಡಿಸಿಕೊಂಡ ಬಳಿಕವೇ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಆದರೂ ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಕಾರ್ಮಿಕರು ಸ್ಟೋರೇಜ್ ವಿಭಾಗಕ್ಕೆ ಇಳಿದಿರುವುದು ದುರಂತಕ್ಕೆ ಕಾರಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ