ಭಟ್ಕಳ: ಪಟ್ಟಣದ ಮುರಿನಕಟ್ಟೆ ಪ್ರದೇಶದಲ್ಲಿ ಅನಾದಿ ಕಾಲದಿಂದಲೂ ಮಾರಿ ಹೊರೆ ಹಾಕುತ್ತಿದ್ದು, ಈ ಮುರಿನಕಟ್ಟೆಯಲ್ಲಿ ದೇವಿಯ ಎರಡು ಗೊಂಬೆಗಳು ಕಾಣೆಯಾಗಿದ್ದರಿಂದ ಮಂಗಳವಾರ ರಾತ್ರಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಗೊಂಬೆ ಸ್ಥಳದಲ್ಲಿ ಇಲ್ಲ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಹಿಂದೂಗಳು ಮುರಿನಕಟ್ಟೆ ಬಳಿ ಜಮಾಯಿಸಿದ್ದರು. ಇದೊಂದು ಸೂಕ್ಷ್ಮ ವಿಚಾರ ಆಗಿರುವುದರಿಂದ ಪರಿಸ್ಥಿತಿ ಬಿಗಡಾಯಿಸಬಹುದು ಎನ್ನುವ ಉದ್ದೇಶದಿಂದ ಪೊಲೀಸರು ಕೂಡಾ ಹೆಚ್ಚಿನ ಬಲದೊಂದಿಗೆ ಸ್ಥಳಕ್ಕೆ ಬಂದಿದ್ದರು.
ಸ್ಥಳದಲ್ಲಿ ಮಾರಿ ಹೊರೆಯೊಂದಿಗೆ ಹಾಕಿದ್ದ ಗೊಂಬೆಗಳು ನಾಪತ್ತೆ ಆಗಿರುವುದಕ್ಕೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ್ದರಿಂದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಆಕ್ರೋಶಿತರನ್ನು ಸಮಾಧಾನಿಸಲು ಯತ್ನಿಸಿದರೂ ಕೇಳುವವರೂ ಯಾರೂ ಇರಲಿಲ್ಲ.ಮುರಿನಕಟ್ಟೆ ಪ್ರದೇಶದಲ್ಲಿ ಹಾಕಿದ್ದ ಗೊಂಬೆಗಳು ಎಲ್ಲಿಗೆ ಹೋದವು ಎನ್ನುವುದೇ ಎಲ್ಲರ ಆಕ್ರೋಶದ ಪ್ರಶ್ನೆಯಾಗಿತ್ತು. ಗೊಂಬೆ ನಾಪತ್ತೆಯಿಂದ ಭಕ್ತರ ಧಾರ್ಮಿಕ ಆಚರಣೆ ಮತ್ತು ಭಾವನೆಗೆ ಧಕ್ಕೆ ಉಂಟಾಗಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೂರಾರು ಭಕ್ತರು ಪೊಲೀಸರಲ್ಲಿ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಮುಖಂಡ ಗೋವಿಂದ ನಾಯ್ಕ ಅವರು, ಈಗಾಗಲೇ ಗೊಂಬೆ ಕಾಣೆಯಾದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ದೂರವಾಣಿಯಲ್ಲಿ ಮಾತನಾಡಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.ಇನ್ನೋರ್ವ ಮುಖಂಡ ಶ್ರೀಕಾಂತ ನಾಯ್ಕ ಆಸರಕೇರಿ ಅವರು, ಆಕ್ರೋಶಗೊಂಡಿದ್ದ ಭಕ್ತರ ಮನವೊಲಿಸಿದರು. ಜಮಾಯಿಸಿದ್ದ ಭಕ್ತರು ಎಲ್ಲರೂ ಸೇರಿ ಮಾರಿ ಹೊರೆಯನ್ನು ಮುಂದಿನ ಕಟ್ಟೆಗೆ ಸಾಗಿಸಲು ಮುಂದಾದರು. ಗೊಂಬೆ ನಾಪತ್ತೆ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪರಿಸ್ಥಿತಿ ಸದ್ಯ ತಿಳಿಯಾದರೂ ಇದೊಂದು ಧಾರ್ಮಿಕ ಭಾವನೆ ವಿಷಯವಾಗಿರುವುದರಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಮುಂಜಾಗ್ರತಾ ಕ್ರಮವಾಗಿ ಮುರಿನಕಟ್ಟೆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.