ಉಡುಪಿ : ಯಕ್ಷಗಾನ ಕಲೆ - ಕಲಾವಿದರ ಕ್ಷೇಮ ಚಿಂತನೆಯೊಂದಿಗೆ ಕಾರ್ಯಪ್ರವೃತ್ತವಾಗಿರುವ ಉಡುಪಿ ಯಕ್ಷಗಾನ ಕಲಾರಂಗವು ನೀಡುವ ಪ್ರಶಸ್ತಿಗಳಿಗೆ ಅತ್ಯಂತ ಪ್ರತಿಷ್ಠಿತ ಗೌರವವಿದೆ. ಈ ಸಂಸ್ಥೆಯು ಪ್ರತಿವರ್ಷ ಕಲಾ ಸಂಘಟನೆಗೆ 1 ಲಕ್ಷ ರು. ನಗದು ಪುರಸ್ಕಾರದ ವಿಶ್ವೇಶತೀರ್ಥ ಪ್ರಶಸ್ತಿ, ಯಕ್ಷಗಾನ ವಿದ್ವಾಂಸರಿಗೆ 60,000 ರು. ನಗದು ಪುರಸ್ಕಾರದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಮತ್ತು ಕಲಾವಿದರ, ಗಣ್ಯರ ಸ್ಮರಣೆ ಹಾಗು ಗೌರವಾರ್ಥ 20,000 ರು. ನಗದು ಪುರಸ್ಕಾರದ 26 ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡುತ್ತಾ ಬಂದಿದೆ.ಈ ವರ್ಷದಿಂದ ಈ ಪ್ರಶಸ್ತಿ ಗುಚ್ಛಕ್ಕೆ ಇನ್ನೆರಡು ಪ್ರಶಸ್ತಿಗಳು ಸೇರ್ಪಡೆಯಾಗಲಿವೆ. ಕಲಾಪೋಷಕ ಡಾ. ಟಿ. ಶ್ಯಾಮ್ ಭಟ್ಟ ಅವರು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಮೂಲಕ ಇನ್ನೆರಡು ಪ್ರಶಸ್ತಿಗಳನ್ನು ಸ್ಥಾಪಿಸಲು ಸಂಕಲ್ಪಿಸಿ ನ.7ರಂದು ಸಂಪಾಜೆಯಲ್ಲಿ ಸಂಪನ್ನಗೊಂಡ ಯಕ್ಷೋತ್ಸವದಲ್ಲಿ ಪ್ರಶಸ್ತಿ ನಿಧಿಯನ್ನು ಕಲಾರಂಗಕ್ಕೆ ಹಸ್ತಾಂತರಿಸಿದರು.ಈ ಮೊತ್ತದಲ್ಲಿ ಯಕ್ಷಗಾನದ ದಶಾವತಾರಿಯೆಂದೇ ಖ್ಯಾತರಾದ ಕೆ.ಗೋವಿಂದ ಭಟ್ಟರ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ 20,000 ರು. ನಗದು ಪುರಸ್ಕಾರ ಮತ್ತು ಯಕ್ಷಗಾನದ ಸೀಮಾಪುರುಷ ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ‘ಶೇಣಿ ಪ್ರಶಸ್ತಿ’ 75,000 ನಗದು ಪುರಸ್ಕಾರಗಳನ್ನು ನೀಡಲಾಗುತ್ತದೆ ಇದರೊಂದಿಗೆ ಯಕ್ಷಚೇತನ ಮತ್ತು ಸೇವಾ ಭೂಷಣ ಪ್ರಶಸ್ತಿಗಳು ಸೇರಿ ಕಲಾರಂಗದ ಒಟ್ಟೂ ಪ್ರಶಸ್ತಿಗಳ ಸಂಖ್ಯೆ 30 ತಲುಪಿದೆ.ಹಿರಿಯ ಕಲಾವಿದರನ್ನು ಗೌರವಿಸುವ ಸಂಸ್ಥೆಯ ಈ ಯೋಜನೆಗೆ ಡಾ.ಶ್ಯಾಮ್ ಭಟ್ಟರು ತಮ್ಮ ನೆಚ್ಚಿನ ಮಹಾನ್ ಕಲಾವಿದರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಕಲಾಪ್ರೀತಿಯನ್ನು ಮೆರೆದಿದ್ದಾರೆ. ಅವರ ಔದಾರ್ಯಕ್ಕೆ, ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಈ ಯಕ್ಷೋತ್ಸವದಲ್ಲಿ ಯಕ್ಷಗಾನ ಕಲಾರಂಗಕ್ಕೆ ''''ಯಕ್ಷಾಧ್ವರ್ಯು ಪ್ರಶಸ್ತಿ'''' ನೀಡಿ ಗೌರವಿಸಲಾಯಿತು. ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳ ಪುಣ್ಯಸ್ಮೃತಿಯಲ್ಲಿ ಪ್ರದಾನ ಮಾಡಲಾದ ಪ್ರಶಸ್ತಿಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಂದ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವೀಕರಿಸಿದರು.ಯಕ್ಷಾಧ್ವರ್ಯು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳ ಪುಣ್ಯಸ್ಮೃತಿಯಲ್ಲಿ ಪ್ರದಾನ ಮಾಡಲಾದ ಪ್ರಶಸ್ತಿಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಂದ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವೀಕರಿಸಿದರು.