ಸಂಸ್ಕಾರದ ಉಳಿವಿಗೆ ಯಕ್ಷಗಾನ ಸಹಕಾರಿ: ಎಡನೀರು ಶ್ರೀ

KannadaprabhaNewsNetwork |  
Published : Nov 12, 2026, 02:30 AM IST
ಯಕ್ಷೋತ್ಸವ | Kannada Prabha

ಸಾರಾಂಶ

ಸಾಮಾಜಿಕ ಮತ್ತು ರಾಜಕೀಯ ಗೊಂದಲಗಳಿಗೆ ಕಲಾತ್ಮಕತೆಯ ಮೇಲಿನ ನಿರಾಸಕ್ತಿಯೇ ಕಾರಣ. ಸಂಪಾಜೆ ಯಕ್ಷೋತ್ಸವದಂತಹ ಕಾರ್ಯಕ್ರಮಗಳಿಂದ ಸಂಸ್ಕಾರದ ಉದ್ದೀಪನ ಸಾಧ್ಯ. ಆದ್ದರಿಂದ ಸಂಸ್ಕಾರ ಉಳಿಯಲು ಯಕ್ಷೋತ್ಸವ ಸಹಕಾರಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಸುಳ್ಯ : ಸಾಮಾಜಿಕ ಮತ್ತು ರಾಜಕೀಯ ಗೊಂದಲಗಳಿಗೆ ಕಲಾತ್ಮಕತೆಯ ಮೇಲಿನ ನಿರಾಸಕ್ತಿಯೇ ಕಾರಣ. ಸಂಪಾಜೆ ಯಕ್ಷೋತ್ಸವದಂತಹ ಕಾರ್ಯಕ್ರಮಗಳಿಂದ ಸಂಸ್ಕಾರದ ಉದ್ದೀಪನ ಸಾಧ್ಯ. ಆದ್ದರಿಂದ ಸಂಸ್ಕಾರ ಉಳಿಯಲು ಯಕ್ಷೋತ್ಸವ ಸಹಕಾರಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಸಂಪಾಜೆ ಜೂನಿಯರ್ ಕಾಲೇಜ್ ಆವರಣದಲ್ಲಿ ಶನಿವಾರ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆದ 36ನೇ ವರ್ಷದ ಸಂಪಾಜೆ ಯಕ್ಷೋತ್ಸವ -2026 ರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ಭಾಷಣ ಮಾಡಿದರು. ಸಂಸ್ಕೃತ ಮತ್ತು ಸಂಸ್ಕೃತಿಯ ಕಾರಣದಿಂದ ಭಾರತಕ್ಕೆ ಪ್ರತಿಷ್ಠೇ ಬಂದಿದೆ. ಆದ್ದರಿಂದ ಯಾವತ್ತಿನವರೆಗೆ ಅವೆರಡಕ್ಕೆ ಮಾನ್ಯತೆ ಇರುತ್ತೊ ಆವತ್ತಿನವರೆಗೆ ಭಾರತೀಯತೆಗೆ ಮಾನ್ಯತೆ ಇರುತ್ತದೆ. ಎಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಎಡನೀರು ಶ್ರೀಪಾದರು ಯಕ್ಷೋತ್ಸವ ಉದ್ಘಾಟಿಸಿದರೆ, ಸುಬ್ರಹ್ಮಣ್ಯ ಶ್ರೀಪಾದರು ಕೊನೆಯಲ್ಲಿ ಅನುಗ್ರಹ ಸಂದೇಶ ನೀಡಿದರು. ಸಂಪಾಜೆ ಯಕ್ಷೋತ್ಸವದ ನೇತೃತ್ವ ವಹಿಸಿರುವ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್‌ ಅವರನ್ನು ಅವರಿಬ್ಬರೂ ಶ್ಲಾಘಿಸಿ ಆಶೀರ್ವದಿಸಿದರು. ಪ್ರಶಸ್ತಿ ಪ್ರದಾನ :ಕಾರ್ಯಕ್ರಮದಲ್ಲಿ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿಯನ್ನು ನ್ಯಾ.ಶ್ರೀಕೃಷ್ಣ ಎಸ್. ದೀಕ್ಷಿತ್, ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿಯನ್ನು ಮಂಗಳೂರಿನ ಶ್ರೀನಿವಾಸ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರು ಹಾಗೂ ಶ್ರೀನಿವಾಸ ಯುನಿವರ್ಸಿಟಿಯ ಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್, ಶ್ರೀ ಕೇಶವಾನಂದ ಭಾರತಿ ಸಂಗೀತ ಪ್ರಶಸ್ತಿಯನ್ನು ಪ್ರಸಿದ್ಧ ಸಂಗೀತ ನಿರ್ದೇಶಕ ವಿ. ಮನೋಹರ, ಕೇಶವಾನಂದ ಭಾರತಿ ಯಕ್ಷಗಾನಾಧ್ವರ್ಯು ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗ ಉಡುಪಿ, ಶ್ರೀ ಕೇಶವಾನಂದ ಭಾರತೀ ಯಕ್ಷೋತ್ಸವ ಅಭಿನಂದನೆಯನ್ನು ಹೈಕೋರ್ಟ್ ನ್ಯಾಯವಾದಿ ಹಾಗೂ ಸ್ಟಾಕ್ ವಿಟ್ನೆಸ್ ಸುಧಾರಣಾ ಸಮಿತಿ ಸದಸ್ಯ ರಾಜಶೇಖರ ಹಿಲ್ಯಾರು, ಯಕ್ಷೋತ್ಸವ ವೈದಿಕ ಪ್ರಶಸ್ತಿಯನ್ನು ಕುಂಭಾಶಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವಿಶ್ರಾಂತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಯಕ್ಷೋತ್ಸವ ಕಲಾ ಪೋಷಕ ಪ್ರಶಸ್ತಿಯನ್ನು ನಿಶಿತ್ ಕುಮಾರ್ ಶೆಟ್ಟಿ, ಯಕ್ಷೋತ್ಸವ ಸಮ್ಮಾನವನ್ನು ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಯಕ್ಷೋತ್ಸವ ಗೌರವವನ್ನು ಆರ್.ಕೆ. ಭಟ್ ಮೂಡುಬಿದಿರೆ ಅವರಿಗೆ ನೀಡಲಾಯಿತು.

ರಂಗಕರ್ಮಿ ಮೂರ್ತಿ ದೇರಾಜೆ ಗುರುವಂದನೆಗೈದರೆ, ನ್ಯಾಯವಾದಿ ದಳ ಸುಬ್ರಾಯ ಭಟ್ ಅರು ಡಾ. ಕೀಲಾರು ಸಂಸ್ಮರಣೆ ಗೈದರು. ಜಿ.ಲಕ್ಷ್ಮಿಶ್ ರಾವ್, ಡಾ| ಎಂ. ಪ್ರಭಾಕರ ಜೋಷಿ, ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ಟ, ಹರೀಶ್ ಭಟ್ ಬೊಳಂತಿಮೊಗರು, ಯಕ್ಷಗಾನ ಕಲಾವಿದ ವಾಸುದೇವ ರಂಗಾಭಟ್ಟರು ಅಭಿನಂದನಾ ಮಾತುಗಳನ್ನಾಡಿದರು. ಕರ್ಣಾಟಕ ಬ್ಯಾಂಕಿನ ಎಂ.ಡಿ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು.

ಅನೇಕ ಸಂಘ ಸಂಸ್ಥೆಗಳಿಗೆ ಹಾಗೂ ಹಲವು ಕಲಾವಿದರಿಗೆ ನಗದು ನೆರವು ನೀಡಲಾಯಿತು. ಕೆ.ಜಿ. ಮುರಳೀಧರ ಭಟ್ ಸ್ವಾಗತಿಸಿ, ಹಿರಣ್ಯ ವೆಂಕಟೇಶ್ವರ ಭಟ್ ವಂದಿಸಿದರು. ವಾಸುದೇವ ರಂಗಾಭಟ್ ಮತ್ತು ಹರೀಶ್ ಭಟ್ ಬೊಳಂತಿಮೊಗರು ನಿರೂಪಿಸಿದರು. ಡಾ.ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಅಧ್ಯಕ್ಷೆ ಸುಮನಾ ಶ್ಯಾಮ ಭಟ್ ವೇದಿಕೆಯಲ್ಲಿದ್ದರು. ಜನಜಾತ್ರೆ - ನಿರಂತರ ಅನ್ನದಾಸೋಹಸಂಪಾಜೆ ಯಕ್ಷೋತ್ಸವ ಅಕ್ಷರಶಃ ಉತ್ಸವದ ಹಾಗೆ ನಡೆಯಿತು. ಸಾವಿರಾರು ಜನ ನಿರಂತರ ಬರುತ್ತಾ ಹೋಗುತ್ತಾ ಇದ್ದರಲ್ಲದೆ ಅವರೆಲ್ಲರಿಗೆ ನಿರಂತರ ಊಟದ ವ್ಯವಸ್ಥೆ ನಡೆಯುತ್ತಿತ್ತು. ಯಕ್ಷಗಾನ ಭವ್ಯವಾದ ಪೆಂಡಾಲ್‌ನೊಳಗೆ ನಡೆದರೆ, ಊಟೋಪಚಾರಕ್ಕೆ ಜೂನಿಯರ್ ಕಾಲೇಜಿನ ಆವರಣದಲ್ಲಿ ವಿಶೇಷವಾದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಸ್ವಯಂ ಸೇವಕರು ನಿರಂತರವಾಗಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ದುಡಿದರು.

ಈ ಬಾರಿಯ ಸಂಪಾಜೆ ಯಕ್ಷೋತ್ಸವದಲ್ಲಿ ಯಕ್ಷ ಪ್ರಸಂಗ ಪ್ರದರ್ಶನ ನ.7 ಅಪರಾಹ್ನ 1.15ಕ್ಕೆ ಆರಂಭಗೊಂಡು ಮರುದಿನ ನ.8ರ ಸಂಜೆ 6 ಗಂಟೆ ವರೆಗೆ ಮುಂದುವರಿದು 3 ಪ್ರಸಂಗಗಳನ್ನು ಪ್ರಸ್ತುತ ಪಡಿಸಲಾಗಿತ್ತು. ಬಡಗುತಿಟ್ಟಿನ ಮಾಯಾ ಮೃಗಾವತಿ, ಬಳಿಕ ಸಭಾ ಕಾರ್ಯಕ್ರಮ, ಬಳಿಕ ತೆಂಕು ಮತ್ತು ಬಡಗು ತಿಟ್ಟುಗಳ ಸಮ್ಮಿಳಿತದ ಮಾಯಾ ಮಾನಿನಿ, ಬಳಿಕ ತೆಂಕು ತಿಟ್ಟಿನ ಮಾಯಾವಿಹಾರಿ ಯಕ್ಷಗಾನ ಪ್ರದರ್ಶನ ಸಂಪನ್ನಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌