ಮೂಡುಬಿದಿರೆ : ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡು ಹೆಸರಾಗಿದ್ದ ಜಿ.ವಾಸುದೇವ ಪೈ ಸ್ಮರಣಾರ್ಥ ಅವರ ಮಿತ್ರ ಎಸ್.ಎನ್ ಮೂಡುಬಿದಿರೆ ಬಳಗವು 1975 ರಲ್ಲಿ ಆರಂಭಿಸಿದ್ದ ಜಿ.ವಿ.ಪೈ ಮೆಮೋರಿಯಲ್ ಟ್ರಸ್ಟ್ ಮತ್ತು ಆಸ್ಪತ್ರೆ ಸಾಧನೆಯಲ್ಲೂ ನಿರಂತರ ಬೆಳೆಯುತ್ತಲೇ ಇದೆ.
ಈ ಹಿಂದೆ 2024ರಲ್ಲಿ ಆಸ್ಪತ್ರೆಯ ಕಾರ್ಯವೈಖರಿಯಿಂದ ಸಂತಸಗೊಂಡ ಅವರು ತಮ್ಮ ದಾನಿಗಳ ತಂಡ ಸೋಶಿಯಲ್ ಸೇವಾ ಇನಿಶಿಯೇಟಿವ್ ಸಹಯೋಗದಲ್ಲಿ 32 ಲಕ್ಷ ರು. ವೆಚ್ಚದಲ್ಲಿ ಅಲ್ಟ್ರಾ ಸೌಂಡ್ ಆಂಡ್ ಎಕೋ ಕಾರ್ಡಿಯೋಗ್ರಫಿ ಮೆಶಿನ್ ಕೊಡುಗೆಯಾಗಿ ನೀಡಿದ್ದರು. ಇಂದು ಜಿ.ವಿ.ಪೈ ಸೂಪರ್ ಸ್ಪೆಶಾಲಿಟಿ ಸೌಲಭ್ಯಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ನಿಭಾಯಿಸುವ ತಂಡ ಕಟ್ಟಿಕೊಂಡಿದೆ.
ದುಬಾರಿ ಚಿಕಿತ್ಸೆಯಾಗಿರುವ ಡಯಾಲಿಸೀಸ್ ಈ ಆಸ್ಪತ್ರೆಯಲ್ಲಿ ಕೇವಲ 400 ರು. ಗೆ ಲಭ್ಯ. ಕಾರಣ ವೆಚ್ಚಗಳನ್ನೆಲ್ಲ ದಾನಿಗಳು ಭರಿಸಲು ಸರತಿ ಸಾಲಲ್ಲಿ ನಿಂತಂತಿದೆ.ಬಿಪಿಎಲ್ ರೋಗಿಗಳಿಗೆ ಪಾಂಗಾಳ ನಾಯಕ್ಸ್ ಫ್ಯಾಮಿಲಿ ಟ್ರಸ್ಟ್ ಒಂದು ಡಯಾಲಿಸೀಸ್ ಗೆ 600 ರು. ನೆರವು ನೀಡಿದರೆ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ಎಪಿಎಲ್ ಕಾರ್ಡುದಾರರಿಗೂ ಇದೇ ನೆರವು ಲಭ್ಯವಾಗಿದೆ. ಮೂಡುಬಿದಿರೆಯ ಸಮಾಜ ಮಂದಿರ ಸಭಾದ ವತಿಯಿಂದಲೂ ಈ ಯೋಜನೆಗೆ ಕೊಡುಗೆ ಸಲ್ಲಿಸುವ ಇರಾದೆಯನ್ನು ಜಿ.ವಿ.ಪೈ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಕೆ. ಅಭಯಚಂದ್ರ ಜೈನ್ ಈ ಸಂದರ್ಭ ಪ್ರಕಟಿಸಿದ್ದಾರೆ. ಆಸ್ಪತ್ರೆಯ ಪ್ರಗತಿಗೆ ಆರ್ಥಿಕವಾಗಿ ಆಧರಿಸಿರುವ ಮೂಡುಬಿದಿರೆ ಸೊಸೈಟಿ ವತಿಯಿಂದಲೂ ಡಯಾಲಿಸೀಸ್ ಯೋಜನೆಗೆ ನೆರವಾಗುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಪ್ರಕಟಿಸಿದ್ದಾರೆ. ಮುಂದಿನ ಯೋಜನೆಗಳೇನು?: ಎರಡು ಡಯಾಲಿಸಿಸ್ ಮೆಶಿನ್ ಹಸ್ತಾಂತರಿಸುವ ಸರಳ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಪಿ.ಎಸ್.ಭಟ್ ಬ್ಲಾಕ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ದಾನಿ ಪ್ರಕಾಶ್ ಪೈ ಗ್ರಾಮೀಣ ಆರೋಗ್ಯ ನಮಗೆ ಆಸಕ್ತಿ ಮತ್ತು ಆದ್ಯತೆಯ ಕ್ಷೇತ್ರವಾಗಿತ್ತು. ನಮ್ಮ ಹೂಡಿಕೆಯಲ್ಲಿ ರೋಗಿಗಳ ಸಂತಸವೇ ನಮಗೆ ಡಿವಿಡೆಂಡ್ ಎಂದ ಅವರು ಇನ್ನೇನು ಅಗತ್ಯವಿದೆ ಹೇಳಿ ಎನ್ನುವ ಉತ್ಸಾಹದಲ್ಲಿ ವಾಟ್ ನೆಕ್ಟ್ಸ್? ಎಂದು ಮಾತು ಮುಗಿಸಿದರು.
ಡಯಾಲಿಸೀಸ್ ಸೆಂಟರ್‌ಗೆ ಹೆಚ್ಚಿನ ಬೇಡಿಕೆ !ಜಿವಿಪೈ ಆಸ್ಪತ್ರೆಯ ಡಯಾಲಿಸೀಸ್ ಸೆಂಟರ್ ಮಿತ ದರ ಮತ್ತು ಗುಣಮಟ್ಟದ ಸೇವೆಯಿಂದ ಹೆಚ್ಚಿನವರ ಆದ್ಯತೆಯಾಗಿದೆ. 2023 ರಲ್ಲಿ 1051, 2024 ರಲ್ಲಿ 1357, 2025 ರಲ್ಲಿ 1913 ಮತ್ತು ಈ ವರ್ಷ ಈಗಾಗಲೇ ಸಂಖ್ಯೆ 1751 ರ ಗಡಿ ದಾಟಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ಸಂಭ್ರಮಿಸುವ ಸಾಧನೆಯಲ್ಲ. ಆದರೆ ಅಗತ್ಯವಿದ್ದವರಿಗಾಗಿ ನಾವು ತಲುಪಿದ್ದೇವೆ ಎನ್ನುವ ಧನ್ಯತೆ. ಕ್ರಾನಿಕಲ್ ಕಿಡ್ನಿ ಕಾಯಿಲೆ ಯ ರೋಗಿಗಳು ಹೆಚ್ಚುತ್ತಲೇ ಇದ್ದಾರೆ ಬಿಪಿಶುಗರ್ ನಿಯಂತ್ರಿಸುವುದೇ ಇದಕ್ಕೆ ಪರಿಹಾರ ಎಂದು ತಜ್ಞ ಡಾ. ಜನಾರ್ಧನ ಕಾಮತ್ ಹೇಳಿದರು. ಟೆಕ್ನೀಶಿಯನ್ ನಿರೀಕ್ಷಾ ಪೂಜಾರಿ , ಯಶೋಧಾ, ನಿಶಾ ಮತ್ತು ಕಾವ್ಯ ಬಳಗದ ಸೇವೆ ಚಿಕಿತ್ಸಾ ಕೇಂದ್ರದ ವಿಶೇಷತೆ ಎಂದವರು ಹೇಳಿದರು. ಜಿ.ವಿ.ಪೈ ಅವರಂಥಹ ಸಮಾಜ ಸೇವಕರ ಹೆಸರಲ್ಲಿ 1975ರಲ್ಲಿ ಈ ಸೇವಾ ಮನೋಭಾವದ ಆಸ್ಪತ್ರೆಯನ್ನು ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ.ಪೈ ಉದ್ಘಾಟಿಸಿದ್ದರು ಎನ್ನುವುದೂ ವಿಶೇಷ.