ಇಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳ ಕಿತ್ತಾಟ

KannadaprabhaNewsNetwork |  
Published : Aug 20, 2024, 01:49 AM ISTUpdated : Aug 20, 2024, 11:30 AM IST
19ಐಎನ್‌ಡಿ1,ಬಾಬು ರಾಠೋಡ ಪ್ರಭಾರ ಇಒ ,ತಾಪಂ,ಇಂಡಿ ಭಾವಚಿತ್ರ. | Kannada Prabha

ಸಾರಾಂಶ

ಇರುವುದೊಂದೇ ಹುದ್ದೆ, ಅದಕ್ಕೆ ಇಬ್ಬರು ಅಧಿಕಾರಿಗಳ ಕಿತ್ತಾಟ. ಯಾರ ಮಾತಿಗೆ ಮಣೆ ಹಾಕಬೇಕು ಎನ್ನುವುದು ಸಿಬ್ಬಂದಿಗೆ ಗೊಂದಲ!.ಇಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿರುವ ಜಟಾಪಟಿ 

  ಇಂಡಿ : ಇರುವುದೊಂದೇ ಹುದ್ದೆ, ಅದಕ್ಕೆ ಇಬ್ಬರು ಅಧಿಕಾರಿಗಳ ಕಿತ್ತಾಟ. ಯಾರ ಮಾತಿಗೆ ಮಣೆ ಹಾಕಬೇಕು ಎನ್ನುವುದು ಸಿಬ್ಬಂದಿಗೆ ಗೊಂದಲ!.

ಇಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದಿಗೆ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿರುವ ಜಟಾಪಟಿ ನಡೆದಿದ್ದು ವರ್ಗಾವಣೆಗೊಂಡು ಬಂದಿದ್ದ ಗುರುಶಾಂತಪ್ಪ ಬೆಳ್ಳುಂಡಗಿ ನ್ಯಾಯಕ್ಕಾಗಿ ಕಚೇರಿ ಹೊರಗಡೆ ಕುಳಿತಿದ್ದಾರೆ. ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂದು ಕಣ್ಣೀರಿಟ್ಟ ಘಟನೆ ನಡೆದಿದೆ.

ತಾಪಂ ಇಒ ಹುದ್ದೆಗೆ ಇಬ್ಬರು ಅಧಿಕಾರಿಗಳಾದ ಬಾಬು ರಾಠೋಡ ಹಾಗೂ ಗುರುಶಾಂತಪ್ಪ ಬೆಳ್ಳುಂಡಗಿ ನಡುವೆ ಪೈಪೊಟಿ ನಡೆಯುತ್ತಿದೆ. ಸರ್ಕಾರ ಜು.29 ರಂದು ಸಾರ್ವಜನಿಕ ಆಡಳಿತಾತ್ಮಕ ಹಿತದೃಷ್ಟಿಯಿಂದ ಇಂಡಿ ತಾಲೂಕು ಪಂಚಾಯತಿ ಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಬು ರಾಠೋಡ ಅವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತಿ ವಿಜಯಪುರಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಇಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಅಧಿಸೂಚನೆ ಹೊರಡಿಸಿದೆ. 

ಬಾಬು ರಾಠೋಡ ಜಿಲ್ಲಾ ಪಂಚಾಯತಿಗೆ ವರದಿ ಮಾಡಿಕೊಂಡು ಚಲನಾದೇಶ ಪಡೆದುಕೊಂಡು ವಿಜಯಪುರ ತಾಲೂಕು ಪಂಚಾಯತಿ ಕಚೇರಿಗೆ ಹಾಜರಾಗಿದ್ದಾರೆ. ಸರ್ಕಾರ ಆದೇಶವನ್ನು ಪಡೆದುಕೊಂಡು ಗುರುಶಾಂತಪ್ಪ ಬೆಳ್ಳುಂಡಗಿ ಅವರು ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ನನಗೆ ಇಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಕರ್ತವ್ಯ ನಿರ್ವಹಿಸಲು ಚಲನಾದೇಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಆದರೆ, ಜಿಲ್ಲಾ ಪಂಚಾಯತಿ ಸಿಇಒ ಅವರು ಅನಾರೋಗ್ಯದಿಂದ ಎರಡು ದಿನಗಳವರೆಗೆ ಕಚೇರಿಗೆ ಬಾರದೆ ಇರುವುದರಿಂದ ಗುರುಶಾಂತಪ್ಪ ಬೆಳ್ಳುಂಡಗಿ ಅವರು ನೇರವಾಗಿ ಇಂಡಿ ತಾಲೂಕು ಪಂಚಾಯತಿ ಕಚೇರಿಗೆ ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. 

ನಂತರ ಸರ್ಕಾರ ಜು.31 ರಂದು ಮತ್ತೊಂದು ವರ್ಗಾವಣೆ ಅಧಿಸೂಚನೆ ಹೊರಡಿಸಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತಿ ಇಂಡಿ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತಿ ಕೊಡುಗು ಜಿಲ್ಲೆ ಮಡಿಕೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 

ಹೀಗಾಗಿ ವಿಜಯಪುರ ಜಿಲ್ಲಾ ಪಂಚಾಯತಿ ಸಿಇಒ ಅವರು ಆ.14 ರಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿ ಗುರುಶಾಂತಪ್ಪ ಬೆಳ್ಳುಂಡಗಿ ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಇಂಡಿ ಅವರನ್ನು ಸರ್ಕಾರದ ಅಧಿಸೂಚನೆಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಪಂಚಾಯತಿ ಇಒ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದ್ದು, ಅದರಂತೆ ಸರ್ಕಾರ ಸ್ಥಳ ನಿಯುಕ್ತಿಗೊಳಿಸಿದಂತೆ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ತಾಪಂ ಇಂಡಿ ಅವರನ್ನು ಆ.14 ರಂದು ಬಿಡುಗಡೆಗೊಳಿಸಿ, ಈ ಸ್ಥಳಕ್ಕೆ ಪ್ರಭಾರ ವಹಿಸಿಕೊಳ್ಳಲು ವಿಜಯಪುರ ತಾಲೂಕು ಪಂಚಾಯತಿ ಇಒ ಬಾಬು ರಾಠೋಡ ಅವರಿಗೆ ಹೆಚ್ಚುವರಿಯಾಗಿ ವಹಿಸಿ ಆದೇಶಿಸಿದ್ದಾರೆ. 

ಬಾಬು ರಾಠೋಡ ಅವರು ಇಂಡಿ ತಾಲೂಕು ಪಂಚಾಯತಿ ಪ್ರಭಾರ ಹುದ್ದೆಯನ್ನು ವಹಿಸಿಕೊಂಡಿದ್ದು, ಮಡಿಕೇರಿಗೆ ವರ್ಗಾವಣೆಯಾಗಿದ್ದ ಗುರುಶಾಂತಪ್ಪ ಬೆಳ್ಳುಂಡಗಿ ಅವರು ಕೊಡಗು ತಾಲೂಕು ಪಂಚಾಯತಿಗೆ ಹೋಗದೇ ಸರ್ಕಾರ ಸಾಮಾನ್ಯ ವರ್ಗಾವಣೆಯಲ್ಲಿ ನನಗೆ ಇಂಡಿ ತಾಲೂಕು ಪಂಚಾಯತಿ ಇಒ ಆಗಿ ವರ್ಗಾವಣೆ ಮಾಡಿದೆ. ನಾನೇ ಇಂಡಿ ತಾಲೂಕು ಪಂಚಾಯತಿ ಇಒ ಆಗಿ ಮುಂಚದುವರೆಯಲು ಶನಿವಾರ ಇಂಡಿ ತಾಲೂಕು ಪಂಚಾಯತಿ ಕಚೇರಿಗೆ ಆಗಮಿಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಅವರಿಗೆ ಕಚೇರಿ ಬಾಗಿಲು ತೆರೆದು ಕೊಡದೇ ಇರುವುದರಿಂದ ಗುರುಶಾಂತಪ್ಪ ಬೆಳ್ಳುಂಡಗಿ ಅವರು ಕಚೇರಿ ಬಾಗಿಲು ಪಾವಟಿಗೆಯಲ್ಲಿ ಕುಳಿತುಕೊಂಡಿದ್ದಾರೆ.

 ಸೋಮವಾರವೂ ಸಹ ಕಚೇರಿ ಬಾಗಿಲಿನ ಪಾವಟಿಗೆಯಲ್ಲಿ ಕುಳಿತುಕೊಂಡಿದ್ದರಿಂದ ತಾಲೂಕು ಮಟ್ಟದ ಅಧಿಕಾರಿ ಎಸ್‌.ಆರ್‌.ರುದ್ರವಾಡಿ, ತಾಲೂಕು ಪಂಚಾಯತಿ ಎಡಿ ಸಂಜಯ ಖಡಗೇಕರ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಗಣಪತಿ ಬಾಣಿಕೋಲ ಸೇರಿ ಗುರುಶಾಂತಪ್ಪ ಬೆಳ್ಳುಂಡಗಿ ಅವರ ಮನವೊಲಿಸಿ, ಮೇಲಾಧಿಕಾರಿಗಳ ಮಟ್ಟದಲ್ಲಿ ಪ್ರಯತ್ನಿಸಬೇಕು. ಹೊರಗಡೆ ಕುಳಿತು ಹುದ್ದೆಗೆ ಅಗೌರವ ಆಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರಿಂದ ಇದಕ್ಕೆ ಒಪ್ಪಿ ಅಧಿಕಾರಿ ಬೆಳ್ಳುಂಡಗಿ ಅವರು ಜಿಪಂ ಸಿಇಒ ಅವರ ಗಮನಕ್ಕೆ ತಂದಿದ್ದೇನೆ. ಅವರ ನಡೆ ಎನಾಗುತ್ತದೆ ನೋಡೊಣ ಎಂದು ಸುಮ್ಮನಾದರು. ಜಿಲ್ಲಾ ಪಂಚಾಯತಿ ಸಿಇಒ ಅವರ ನಡೆ ಎನಾಗಲಿದೆ ಎಂಬುವುದು ಕಾದು ನೋಡಬೇಕಾಗಿದೆ.

ನಾನು ಮೊದಲು ಇಂಡಿ ತಾಪಂ ಇಒ ಆಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸರ್ಕಾರ ನನಗೆ ವರ್ಗಾವಣೆ ಮಾಡಿ ವಿಜಯಪುರ ತಾಪಂಗೆ ವರ್ಗಾವಣೆ ಮಾಡಿದೆ. ನಂತರ ನನಗೆ ಜಿಪಂ ಸಿಇಒ ಅವರು ಇಂಡಿ ತಾಪಂಗೆ ಪ್ರಭಾರ ಇಒ ಹುದ್ದೆ ವಹಿಸಿಕೊಟ್ಟಿದ್ದಾರೆ. ಸರ್ಕಾರ,ಅಧಿಕಾರಿಗಳ ಆದೇಶ ಪಾಲನೆ ಮಾಡಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.

-ಬಾಬು ರಾಠೋಡ, ಪ್ರಭಾರ ಇಒ ತಾಪಂ ಇಂಡಿ.ನಾನು ಸೈನಿಕನಾಗಿ ದೇಶ ಸೇವೆ ಮಾಡಿದ್ದೇನೆ. ಮಾಜಿ ಸೈನಿಕ ಕೋಟಾದಡಿಯಲ್ಲಿ ಕೆಎಎಸ್‌ ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯ ತಾಪಂ ಇಒ ಆಗಿ ಕರ್ತವ್ಯ ನಿರ್ವಹಿಸಿ, ಸರ್ಕಾರ ವರ್ಗಾವಣೆ ಮಾಡಿದ್ದರಿಂದ ಇಂಡಿ ತಾಪಂಗೆ ಇಒ ಆಗಿ ಸರ್ಕಾರದ ಆದೇಶ ಪಡೆದುಕೊಂಡು ಬಂದಿದ್ದೇನೆ. ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ದಿನಾಂಕ ಮುಗಿದ ಬಳಿಕಯೂ ನನಗೆ ಮತ್ತೇ ಮಡಿಕೇರಿಗೆ ವರ್ಗಾವಣೆ ಮಾಡಿದೆ. ನನಗೆ ಇಂಡಿಯಲ್ಲಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದಾರೆ. ಪ್ರಾಮಾಣಿಕರಿಗೆ ಇಲ್ಲಿ ಬೆಲೆ ಇಲ್ಲ. ಇಂಡಿ ತಾಪಂ ಸಿಬ್ಬಂದಿ ಸಹ ನನಗೆ ಕಚೇರಿ ಬಾಗಿಲು ತೆರೆದು ಕೊಡದೆ ಅಗೌರವ ತೊರಿದ್ದಾರೆ. ಹೀಗಾಗಿ ನಾನು ಹೊರಗಡೆ ಕುಳಿತು ನ್ಯಾಯಕ್ಕಾಗಿ ಹೊರಾಟ ಮಾಡುತ್ತಿದ್ದೇನೆ. ಪ್ರಾಮಾಣಿಕತೆಗೆ ಬೆಲೆ ಇಲ್ಲವೆಂದು ನೋವಾಗುತ್ತಿದೆ.

-ಗುರುಶಾಂತಪ್ಪ ಬೆಳ್ಳುಂಡಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ