ಭಟ್ಕಳ: ತಾಲೂಕಿನ ಹಡೀನ ಹೊನ್ನೇಮಡಿ ಸಮುದ್ರ ತೀರದಲ್ಲಿ ಆಟವಾಡಲು ಹೋಗಿದ್ದ ಇಬ್ಬರು ನೀರುಪಾಲಾಗಿದ್ದು, ಓರ್ವ ಬಾಲಕನ ಮೃತದೇಹ ಪತ್ತೆಯಾಗಿದ್ದರೆ ಇನ್ನೋರ್ವನ ಸುಳಿವು ಪತ್ತೆಯಾಗಿಲ್ಲ.
ಮೃತನನ್ನು ಹೆಬಳೆಯ ಮೌಲಾನಾ ನ್ಯಾಮತ್ತುಲ್ಲ ಅಸ್ಕೇರಿ ಅವರ ಪುತ್ರ ಇನಾಮ್ ಅಸ್ಕೇರಿ (೧೪) ಎಂದು ಗುರುತಿಸಲಾಗಿದೆ. ಇನ್ನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಆತನನ್ನು ಆಜಾದ ನಗರದ ನಿವಾಸಿ ಮೊಹಮ್ಮದ್ ಕಾಸಿಫ್ (೨೨) ಎಂದು ಹೇಳಲಾಗಿದೆ.
ಆತನಿಗಾಗಿ ಹುಡುಕಾಟ ನಡೆಸಲಾಗಿದ್ದು, ಕತ್ತಲೆಯಾಗಿದ್ದರಿಂದ ಹುಡುಕಲು ತೊಡಕಾಗುತ್ತಿದೆ ಎನ್ನಲಾಗಿದೆ. ದುರ್ಘಟನೆ ಸುದ್ದಿ ತಿಳಿದು ನೂರಾರು ಜನರು ಸ್ಥಳಕ್ಕೆ ಧಾವಿಸಿ ನಾಪತ್ತೆಯಾದವನ ಹುಡುಕಾಟ ನಡೆಸಿದ್ದಾರೆ. ಭಟ್ಕಳದ ಡಿವೈಎಸ್‌ಪಿ ಮಹೇಶ ಕೆ., ಗ್ರಾಮೀಣ ಇನ್‌ಸ್ಪೆಕ್ಟರ್ ಚಂದನಗೋಪಾಲ, ಸಬ್ ಇನ್ಸಪೆಕ್ಟರ್ ಮಯೂರ ಪಟ್ಟಣಶೆಟ್ಟಿ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದು ಹುಡುಕುವಲ್ಲಿ ಸಹಕರಿಸುತ್ತಿದ್ದಾರೆ.