ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿರುಬಿಸಿಲಿನ ನಡುವೆಯೂ ವಯೋವೃದ್ಧರು, ಶತಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎರಡನೇ ಹಂತದ ಮತದಾನದಲ್ಲಿ ಭಾಗಿಯಾಗಿರುವುದು ಗಮನ ಸೆಳೆಯಿತು.
ಮಂಗಳವಾರ ರಾಜ್ಯದ 14 ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನದಲ್ಲಿ ಘಟಾನುಘಟಿ ನಾಯಕರು ಸೇರಿ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನದ ವೇಳೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. 2019ರ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತ ಈ ಬಾರಿ ಶೇಕಡಾವಾರು ಪ್ರಮಾಣದಲ್ಲಿ ಅಧಿಕವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಶೇ.68.66ರಷ್ಟು ಮತದಾನ ಪ್ರಮಾಣವಾಗಿದ್ದರೆ, ಈ ಬಾರಿ ಶೇ.70ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಗಿಂತ (68%) ಎರಡನೇ ಹಂತದ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಉತ್ಸಾಹದಲ್ಲಿ ಭಾಗಿಯಾಗಿದ್ದಾರೆ. ವೃದ್ಧರು, ಶತಾಯುಷಿಗಳು ಹುಮ್ಮಸ್ಸಿನಿಂದ ತಮ್ಮ ಹಕ್ಕು ಚಲಾಯಿಸಿದ ದೃಶ್ಯ ಕಂಡು ಬಂತು. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ನಡೆಯಿತು. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಭಾ ಮಲ್ಲಿಕಾರ್ಜುನ್, ಗಾಯತ್ರಿ ಸಿದ್ದೇಶ್ವರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ತೀರ್ಮಾನವಾಗಿದ್ದು, ಜೂ.4ರಂದು ಫಲಿತಾಂಶ ಪ್ರಕಟವಾಗಲಿದೆ.
ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ನಿಧನವಾಗಿ ಆರಂಭಗೊಂಡಿತು. ಬೆಳಗ್ಗೆ 9 ಗಂಟೆಗೆ ಚುನಾವಣಾ ಆಯೋಗವು ಶೇಕಡಾವಾರು ಪ್ರಕಟಿಸಿದಾಗ ಶೇ.9.45ರಷ್ಟು ಇತ್ತು. ನಂತರ ಮತದಾನ ಬಿರುಸುಗೊಂಡು 11 ಗಂಟೆಯ ಶೇಕಡಾವಾರು ಪ್ರಮಾಣ 24.48ರಷ್ಟಾಯಿತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.41.59ರಷ್ಟು, 3 ಗಂಟೆಯ ಹೊತ್ತಿಗೆ ಶೇ.54.203ರಷ್ಟು, ಸಂಜೆ 5ಕ್ಕೆ ಶೇ.66.05 ಮತ್ತು ಮತದಾನ ಮುಕ್ತಾಯಗೊಂಡಾಗ ಶೇ.70ಕ್ಕೂ ಹೆಚ್ಚಿನ ಮತದಾನವಾಗಿತ್ತು.
ಮತದಾನ ಬಹಿಷ್ಕಾರ:
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡ್ ಜನರು ಮತದಾನ ಬಹಿಷ್ಕರಿಸಿದರು. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಿಸುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ ಮಾಡಿದ್ದರು.
ಅನೇಕ ಮತದಾರರು ವಿದೇಶದಿಂದ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು. ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಭಿಷೇಕ್ ಲೋಕಿಕೆರೆ ದಾವಣಗೆರೆಯಲ್ಲಿ ಮತಚಲಾಯಿಸಿದರು. ರಾಘವೇಂದ್ರ ಕಮಲಕರ್ ಶೇಠ್ ಎಂಬುವರು ಅಮೆರಿಕದಿಂದ ಕುಟುಂಬ ಸಮೇತ ಆಗಮಿಸಿ ಮತಚಲಾವಣೆ ಮಾಡಿದರು. ರೀತು ಹಾಗೂ ರಕ್ಷಾ ಎಂಬುವವರು ಸಹ ಅಮೆರಿಕದಿಂದ ದಾವಣಗೆರೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.