ಹಿಂದುಳಿದ ವರ್ಗದ ವಸತಿ ನಿಲಯದ ಇಬ್ಬರು ವಿದ್ಯಾರ್ಥಿಗಳು ಪತ್ತೆ

KannadaprabhaNewsNetwork | Published : Dec 25, 2024 12:50 AM

ಸಾರಾಂಶ

ಡಿ.14 ಮತ್ತು 15 ರಂದು ಶಾಲೆಗೆ ರಜೆ ಇದ್ದ ಕಾರಣ ತಾಯಿ ಊರಾದ ಹಾಲಂಶೆಟ್ಟಿಹಳ್ಳಿಗೆ ಬಂದ ನಂತರ ಶಾಲೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದರು. ನಂತರ ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿ ಅಲ್ಲೆ ಉಳಿದುಕೊಂಡಿದ್ದರು. ಖರ್ಚು ವೆಚ್ಚಕ್ಕಾಗಿ ಭಕ್ತಾದಿಗಳಿಂದ ಭಿಕ್ಷೆಬೇಡಿಕೊಂಡು ಕಾಲ ಕಳೆಯುತ್ತಿದ್ದರು ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕಳೆದ ಒಂದು ವಾರದಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ತಾಲೂಕಿನ ಸೋಮನಹಳ್ಳಿಯ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ವಸತಿ ನಿಲಯದ ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಲಕ್ಷ್ಮಿ ಅವರ ಪುತ್ರ ಮಹೇಶ್‌ಗೌಡ ಹಾಗೂ ಎಂ.ಶೋಭಾ ಅವರ ಪುತ್ರ ಪ್ರತೀಕ್ ನಾಪತ್ತೆಯಾಗಿದ್ದರು. ಈ ಬಗ್ಗೆ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕಾರ್ಯಕೈಗೊಂಡರು.

ನಂತರ ವಿದ್ಯಾರ್ಥಿಗಳ ಪೋಷಕರು ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿ ಹುಡುಕಾಟ ನಡೆಸಿದಾಗ ರಾತ್ರಿ ವೇಳೆಗೆ ವಿದ್ಯಾರ್ಥಿಗಳು ಪೋಷಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ನಾಪತ್ತೆಯಾಗಿದ್ದ ಮಹೇಶ್ ಹಾಗೂ ಪ್ರತೀಕ್ ಸೋಮನಹಳ್ಳಿ ಎಸ್.ಸಿ.ಮಲ್ಲಯ್ಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು.

ಡಿ.14 ಮತ್ತು 15 ರಂದು ಶಾಲೆಗೆ ರಜೆ ಇದ್ದ ಕಾರಣ ತಾಯಿ ಊರಾದ ಹಾಲಂಶೆಟ್ಟಿಹಳ್ಳಿಗೆ ಬಂದ ನಂತರ ಶಾಲೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದರು. ನಂತರ ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿ ಅಲ್ಲೆ ಉಳಿದುಕೊಂಡಿದ್ದರು. ಖರ್ಚು ವೆಚ್ಚಕ್ಕಾಗಿ ಭಕ್ತಾದಿಗಳಿಂದ ಭಿಕ್ಷೆಬೇಡಿಕೊಂಡು ಕಾಲ ಕಳೆಯುತ್ತಿದ್ದರು ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಮಂಗಳವಾರ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ ನಂತರ ಮರಳಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ಇಂದು ಧರ್ಮ ಪ್ರವಚನ ಕಾರ್ಯಕ್ರಮ

ಮಂಡ್ಯ:

ನಗರದ ಕಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದ್ದ ಶ್ರೀಮಂಚಮ್ಮ ದೇವಿ ದೇವಾಲಯದ 48 ದಿನಗಳ ಮಂಡಲ ಪೂಜಾ ಕಾರ್‍ಯಕ್ರಮ ಡಿ.25ರಂದು ಮುಕ್ತಾಯಗೊಳ್ಳಲಿದೆ. ಅಂದು ಸಂಜೆ 6 ಗಂಟೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಧರ್ಮ ಪ್ರವಚನ ಕಾರ್‍ಯಕ್ರಮ ನಡೆಯಲಿದೆ.

ಕೊಮ್ಮೇರಹಳ್ಳಿ ವಿಶ್ವಮಾನ ಕ್ಷೇತ್ರದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಕಾರ್‍ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಬಿ.ಜಯಪ್ರಕಾಶ್ ಉಪಸ್ಥಿತರಿರುವರು. ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ಕೆ.ರಾಮಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಕಾರ್‍ಯಕ್ರಮದ ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಟ್ರಸ್ಟ್ ಕಾರ್‍ಯದರ್ಶಿ ಕೆ.ಎಸ್.ಆನಂದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share this article