- ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೈ ಚಳಕ
- - - ಕನ್ನಡಪ್ರಭ ವಾರ್ತೆ ದಾವಣಗೆರೆಮನೆಗಳಲ್ಲಿ ಕಳವು ಕೃತ್ಯ ನಡೆಸುತ್ತಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಹದಡಿ ಠಾಣೆಯ ಪೊಲೀಸರು, ₹10.32 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ವಾಸಿ, ಸೆಂಟ್ರಿಂಗ್ ಕೆಲಸಗಾರ ಮುಬಾರಕ್ ಬ್ಯಾಡಗಿ (22) ಹಾಗೂ ವಿಜಯ ನಗರ ಜಿಲ್ಲೆ ಹರಪನಹಳ್ಳಿ ಪಟ್ಟಣ ಮೂಲದ, ಹಾಲಿ ರಾಣೆಬೆನ್ನೂರು ವಾಸಿ, ಟೈಲ್ಸ್ ಕೆಲಸಗಾರ ಸಾದತ್ ಅಲಿಯಾಸ್ ಸುಳ್ಳ ಸಾದತ್ ಮೊಹಮ್ಮದ್ ರಫೀಕ್ (32) ಬಂಧಿತ ಆರೋಪಿಗಳು.ದಾವಣಗೆರೆಯ ಕುಕ್ಕವಾಡ ಗ್ರಾಮದ ಶಿಕ್ಷಕ ಬಿ.ಟಿ.ಮಧು ಫೆ.17ರಂದು ಮನೆಯಲ್ಲಿ ಕಳವು ನಡೆದಿದ್ದ ಬಗ್ಗೆ ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹದಡಿ ಠಾಣೆ ವ್ಯಾಪ್ತಿಯ 2 ಪ್ರಕರಣ, ಬಸವಾಪಟ್ಟಣ ಠಾಣೆಯ 2 ಸೇರಿದಂತೆ ₹7.20 ಲಕ್ಷ ಮೌಲ್ಯದ 91.00 ಗ್ರಾಂ ಚಿನ್ನಾಭರಣ, ₹4 ಸಾವಿರ ಮೌಲ್ಯದ 50 ಗ್ರಾಂ ಬೆಳ್ಳಿ ಆಭರಣ, ವಸ್ತುಗಳು, ₹58 ಸಾವಿರ ನಗದು ಹಾಗೂ ಚಿತ್ರದುರ್ಗ ಜಿಲ್ಲೆ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ₹1.50 ಲಕ್ಷ ಮೌಲ್ಯದ ಬುಲೆಟ್ ಬೈಕ್, ಕೃತ್ಯಕ್ಕೆ ಬಳಸುತ್ತಿದ್ದ ₹1 ಲಕ್ಷ ಮೌಲ್ಯದ ಸುಜುಕಿ ಆಕ್ಸಸ್ 125 ಸಿಸಿ ಸ್ಕೂಟಿ ಜಪ್ತಿ ಮಾಡಲಾಗಿದೆ.
ಎಎಸ್‌ಪಿ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಮಾಯಕೊಂಡ ಸಿಪಿಐ ಡಿ.ನಾಗರಾಜ ಮಾರ್ಗದರ್ಶನದಲ್ಲಿ ಹದಡಿ ಠಾಣೆ ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್ಐ ಶಕುಂತಲ, ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿ, ಒಟ್ಟು 5 ಪ್ರಕರಣಗಳಲ್ಲಿನ ಸ್ವತ್ತನ್ನು ಜಪ್ತಿ ಮಾಡಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಎಲ್ಲೆಲ್ಲಿ ಕದ್ದಿದ್ದರು?:
ಹರಿಹರ ನಗರ ಠಾಣೆ, ರಾಣೆಬೆನ್ನೂರು ನಗರ ಠಾಣೆ, ದಾವಣಗೆರೆ ಕೆಟಿಜೆ ನಗರ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ, ಭರಮಸಾಗರ, ಹಾವೇರಿ ಜಿಲ್ಲೆ ಗುತ್ತಲ, ಬ್ಯಾಡಗಿ, ಹಾವೇರಿ ನಗರ ಠಾಣೆ, ಶಿವಮೊಗ್ಗ ಜಿಲ್ಲೆಯ ಅನೇಕ ಪೊಲೀಸ್ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ಅವೆಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. 5 ತಿಂಗಳ ಹಿಂದಷ್ಟೇ ಹಾವೇರಿ ಜಿಲ್ಲಾ ಕಾರಾಗೃಹದಿಂದ ಆರೋಪಿಗಳು ಬಿಡುಗಡೆಯಾಗಿದ್ದು, ಕೋರ್ಟ್‌ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ತಂಡದ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.- - - -10ಕೆಡಿವಿಜಿ4, 5:
ಇಬ್ಬರು ಕಳ್ಳರನ್ನು ಬಂಧಿಸಿರುವ ಪೊಲೀಸರು, ಬೈಕ್, ಬುಲೆಟ್ ಸೇರಿದಂತೆ ₹10.32 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ, ನಗದು ಜಪ್ತಿ ಮಾಡಿದರು.