ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾರಿಗೆ ಬಸ್ ಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, 70ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ- 948ರ ತಾಲೂಕಿನ ಬಾಚನಹಳ್ಳಿ ಬಳಿ ಭಾನುವಾರ ಸಂಜೆ ನಡೆದಿದೆ.ಕೊಳ್ಳೇಗಾಲ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಮಳವಳ್ಳಿಯಿಂದ ಕೊಳ್ಳೇಗಾಲ ಕಡೆಗೆ ಹೋಗುತ್ತಿದ್ದ ಮತ್ತೊಂದು ಸಾರಿಗೆ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಮಳವಳ್ಳಿ ಕಡೆಯಿಂದ ಬಂದ ಇನ್ನೊಂದು ಸಾರಿಗೆ ಬಸ್ ಸಹ ಡಿಕ್ಕಿಯಾಗಿದೆ.
ಘಟನೆಯಲ್ಲಿ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 60 ವರ್ಷದ ಮಹಿಳೆ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆ, ಸುಮಾರು 50 ವರ್ಷದ ಮತ್ತೊಬ್ಬ ಮಹಿಳೆಯು ಚಿಕಿತ್ಸೆಗೆ ಫಲಕಾರಿಯಾಗದೇ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪೊಲೀಸರು ಮೃತ ಮಹಿಳೆಯರ ವಿಳಾಸ ಪತ್ತೆಗೆ ಮುಂದಾಗಿದ್ದಾರೆ.ಮೂರು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದ ವಿವಿಧ ಜಿಲ್ಲೆಯ 8ಕ್ಕೂ ಅಧಿಕ ಮಂದಿ ಪ್ರಯಾಣಿಕರಿಗೆ ತೀವ್ರವಾಗಿ ಗಾಯಗಳಾಗಿವೆ. ಅಲ್ಲದೇ 70ಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಕೂಡಲೇ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಾಯದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಘಟನೆಯಿಂದ 1 ಗಂಟೆಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ಥವ್ಯಸ್ಥವಾಗಿತ್ತು. ಬಸ್ ನಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರು ಆ್ಯಂಬುಲೆನ್ಸ್ ಹಾಗೂ ವಾಹನಗಳಲ್ಲಿ ಆಸ್ಪತ್ರೆಗೆ ಸೇರಿಸಿದರು. ಬಸ್ ನ ಚಾಲಕರಿಗೂ ಸಹ ತೀವ್ರವಾಗಿ ಗಾಯವಾಗಿದೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಎಸ್ಪಿ ತಿಮ್ಮಯ್ಯ, ಸಿಪಿಐ ಬಿ.ಎಸ್.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.