ಹುಬ್ಬಳ್ಳಿ: ಸರ್ಕಾರಕ್ಕೆ ಎರಡು ವರ್ಷಗಳು ತುಂಬಿದ್ದು, ವಿಜಯನಗರದ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ದೇಶದ ವಿಷಯದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಿಲ್ಲ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದೇವೆ. ಅವರೇ ರಾಜಕಾರಣ ಮಾಡುತ್ತಿದ್ದಾರೆ. ಇಷ್ಟು ಬೇಗ ಯಾರ ಮಾತು ಕೇಳಿ ಯುದ್ಧ ನಿಲ್ಲಿಸಿದ್ದು? ಎಷ್ಟು ಸರಿ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇವೆ, ಇಡೀ ದೇಶ ಸೈನಿಕರ ಜೊತೆಯಿದೆ ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ, 20ರಂದು ದೊಡ್ಡ ಸಮಾವೇಶ ಮಾಡುತ್ತೇವೆ, ವಿರೋಧ ಪಕ್ಷದವರು ಮೊದಲು ಅವರ ಪಕ್ಷ ಹೇಗಿದೆ ಎಂದು ನೋಡಿಕೊಳ್ಳಲಿ. ಯತ್ನಾಳ ಕಥೆ ಏನಾಗಿದೆ ಎಂದು ಅವರಿಗೆ ಗೊತ್ತಿಲ್ಲವೆ?. ಕೇಂದ್ರ ಸರ್ಕಾರದಿಂದ ನಮಗೆ ಸಾಕಷ್ಟು ಹಣ ಬರಬೇಕು. ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮಹದಾಯಿ ಸೇರಿದಂತೆ ಅನೇಕ ಯೋಜನೆಗಳು ಹಾಗೇ ಉಳಿದಿವೆ ಎಂದರು.ತಿರಂಗಾ ಯಾತ್ರೆಯಲ್ಲೂ ರಾಜಕಾರಣ: ಇನ್ನು ಭಾರತೀಯ ಜನತಾ ಪಕ್ಷದವರು ನಡೆಸುತ್ತಿರುವ ತಿರಂಗಾ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಲ್ಲಿ ತಿರಂಗಾ ಯಾತ್ರೆ ನಾವು ಮಾಡಿದ್ದೇವೆ. ಬಿಜೆಪಿಯವರು ಈಗ ಮಾಡುತ್ತಿದ್ದಾರೆ. ಅದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಿಷಯದಲ್ಲಿ ರಾಜಕಾರಣ ಮಾಡಬಾರದು ಎನ್ನುವುದು ನಮ್ಮ ಆಶಯ ಎಂದರು.