ಬಲಮುರಿ ಕಾವೇರಿ ನದಿಯಲ್ಲಿ ಮುಳುಗಿ ಯುವಕರಿಬ್ಬರು ಸಾವು

KannadaprabhaNewsNetwork |  
Published : May 22, 2026, 01:45 AM IST
21ಕೆಎಂಎನ್ ಡಿ25 | Kannada Prabha

ಸಾರಾಂಶ

ತಾಲೂಕಿನ ಬಲಮುರಿ, ಎಡಮುರಿ ಹಾಗೂ ಕಾರೇಕುರ ಗ್ರಾಮಗಳಲ್ಲಿನ ಕಾವೇರಿ ನದಿಯಲ್ಲಿ ದಿನ ನಿತ್ಯ ಸಾವಿನ ಸಂಖ್ಯೆ ಹೆಚ್ಚಾದ ಕಾರಣ ತಾಲೂಕು ಆಡಳಿತ ಕಾವೇರಿ ನದಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳದಂತೆ ನಿಷೇಧಾಜ್ಞೆ ಹೇರಿತ್ತು. ಆದರೆ, ಸ್ಥಳೀಯರ ಮತ್ತು ವ್ಯಾಪಾರಿಗಳ ಒತ್ತಡಕ್ಕೆ ಮಣಿದ ಪೊಲೀಸರು ಈ ಆದೇಶ ಪಾಲನೆ ಮಾಡದೆ ಮೌನಕ್ಕೆ ಶರಣಾಗಿ ನಿಷೇಧಾಜ್ಞೆ ನಡುವೆಯೂ ಸಹ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ನದಿಯಲ್ಲಿ ಮಿಂದೇಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪೊಲೀಸರ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಬಲಮುರಿ ಕಾವೇರಿ ನದಿಯಲ್ಲಿ ಯುವಕರಿಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಮೈಸೂರು ನಗರದ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ ಸಂತೆಮರಳಿ ಬಳಿಯ ತಮರವಾಡಿ ಗ್ರಾಮದ ಮೊಹನ್ ಕುಮಾರ್ (21) ಹಾಗೂ ಮೈಸೂರಿನ ಜಯಪುರ ಬಳಿಯ ಕೆಳಹಳ್ಳಿ ಗ್ರಾಮದ ರವಿಚಂದ್ರ (21) ಸಾವನಪ್ಪಿದ ಯುವಕರು ಎಂದು ತಿಳಿದು ಬಂದಿದೆ.

ಈ ಇಬ್ಬರು ಐಟಿಐ ಮುಗಿಸಿ ಕೇನ್ಸ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಮತ್ತೊಬ್ಬ ಸ್ನೇಹಿತ ವಿಕಾಸ್ ಜೊತೆಗೂಡಿ ಮೂವರು ಬಲಮುರಿ ಪ್ರವಾಸಿ ತಾಣಕ್ಕೆ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ.

ನೀರಲ್ಲಿ ಮುಳಗಿರುವ ಬಗ್ಗೆ ವಿಕಾಸ್ ಸಮೀಪದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೂಲಕ ಕೆ.ಆರ್.ಸಾಗರ ಪೊಲೀಸ್ ಠಾಣೆ ಮಾಹಿತಿ ನೀಡಿದ್ದಾರೆ. ವೃತ್ತ ನಿರೀಕ್ಷಕ ವಿವೇಕಾನಂದ, ಪಿಎಸ್‌ಐ ರಮೇಶ್ ಕರ್ಕಿಕಟ್ಟೆ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳಿಯ ನುರಿತ ಈಜುಗಾರರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೋಹನ್ ಕುಮಾರ್ ಶವ ಹೊರ ತೆಗೆಯಲಾಗಿದೆ. ರವಿಚಂದ್ರ ಶವ ಪತ್ತೆಯಾಗಿಲ್ಲ. ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಮುಂದುವರಿಸುವುದಾಗಿ ಅಗ್ನಿ ಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ.

ಶವವನ್ನು ಮೈಸೂರು ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ನಿರ್ಲಕ್ಷ್ಯ:

ತಾಲೂಕಿನ ಬಲಮುರಿ, ಎಡಮುರಿ ಹಾಗೂ ಕಾರೇಕುರ ಗ್ರಾಮಗಳಲ್ಲಿನ ಕಾವೇರಿ ನದಿಯಲ್ಲಿ ದಿನ ನಿತ್ಯ ಸಾವಿನ ಸಂಖ್ಯೆ ಹೆಚ್ಚಾದ ಕಾರಣ ತಾಲೂಕು ಆಡಳಿತ ಕಾವೇರಿ ನದಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳದಂತೆ ನಿಷೇಧಾಜ್ಞೆ ಹೇರಿತ್ತು. ಆದರೆ, ಸ್ಥಳೀಯರ ಮತ್ತು ವ್ಯಾಪಾರಿಗಳ ಒತ್ತಡಕ್ಕೆ ಮಣಿದ ಪೊಲೀಸರು ಈ ಆದೇಶ ಪಾಲನೆ ಮಾಡದೆ ಮೌನಕ್ಕೆ ಶರಣಾಗಿ ನಿಷೇಧಾಜ್ಞೆ ನಡುವೆಯೂ ಸಹ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ನದಿಯಲ್ಲಿ ಮಿಂದೇಳುತ್ತಿದ್ದಾರೆ.

ತಹಸೀಲ್ದಾರ್ ನಿರ್ಬಂಧ ಆದೇಶವನ್ನು ನಾಮಕೇವಾಸ್ತೆ ಮಾಡಿ ಪೊಲೀಸ್ ಇಲಾಖೆ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಆದೇಶ ಪಾಲಿಸದೆ ಪೊಲೀಸರ ನಿರ್ಲಕ್ಷ್ಯ ವಹಿಸಿದ್ದ ಕಾರಣ ಇದೀಗ ಮತ್ತೆ ಈ ಸ್ಥಳದಲ್ಲಿ ಪ್ರವಾಸಿಗರಿಬ್ಬರು ಸಾವನ್ನಪಿದ್ದು, ಇವರ ಸಾವಿಗೆ ಯಾರು ಹೊಣೆ ಎಂದು ಪೊಲೀಸರ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗುವಳಿ ಚೀಟಿಗಾಗಿ ಭೂ ಹಕ್ಕುದಾರರ ವೇದಿಕೆ ಪ್ರತಿಭಟನೆ
ಎಚ್‌ಸಿಜಿ ಸಂಸ್ಥೆಯಿಂದ ಉತ್ತರ ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಶುಭಾರಂಭ,