ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಲ್ತಾರೆಶೆಟ್ಟಳ್ಳಿ ಗ್ರಾಮದ ಬಿ.ಸಿ.ಪ್ರಮೋದ್ ಮತ್ತು ಅವರ ಸ್ನೇಹಿತ ಕೌಶಿಕ್ ಅವರು ಮೈಸೂರಿನಿಂದ ವಾಪಸ್ಸಾಗಿ ಯಡವನಾಡು ಮೀಸಲು ಅರಣ್ಯದ ಸನಿಹದಲ್ಲಿರುವ ಕಾರೇಕೊಪ್ಪ ಗ್ರಾಮದ ರಸ್ತೆಗೆ ರಾತ್ರಿ 10.30ಕ್ಕೆ ಬರುತ್ತಿದ್ದಂತೆ ಒಂಟಿ ಸಲಗ ಎದುರಿಗೆ ಬಂದು ಕಾರಿನ ಮೇಲೆ ದಾಳಿ ನಡೆಸಿದೆ.
ಕಾರಿನಲ್ಲಿದ್ದವರು ಜೀವಭಯದಿಂದ ಕಾರಿನಿಂದ ಹೊರಬಂದು ತಪ್ಪಿಸಿಕೊಂಡಿದ್ದಾರೆ. ಓರ್ವ ಕಾಫಿ ತೋಟದೊಳಗೆ ಓಡಿದ್ದಾರೆ. ಸೋಲಾರ್ ತಂತಿ ಬೇಲಿಯಿದ್ದ ಕಾರಣ ಕಾಡಾನೆ ಅಟ್ಟಿಸಿಕೊಂಡು ಹೋಗಿಲ್ಲ. ಇನ್ನೋರ್ವ ಮನೆಯೊಂದರ ಗೇಟ್ ದಾಟಿ ತಪ್ಪಿಸಿಕೊಂಡಿದ್ದಾರೆ. ನಂತರ ಕಾಡಾನೆ ಕಾರನ್ನು 10 ಮೀಟರ್ ದೂರಕ್ಕೆ ಕಾರನ್ನು ತಳ್ಳಿದೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಜಖಂಗೊಂಡಿರುವ ಕಾರನ್ನು ದುರಸ್ತಿಪಡಿಸಲು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ವಿಳಂಬವಾಗಿ ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆ ಹಾವಳಿ ನಿಯಂತ್ರಣದ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತಿದೆ. ಆದರೆ ಕಾಡಾನೆಗಳ ಕಾಟ ನಿಯಂತ್ರಣಕ್ಕೆ ಬಂದಿಲ್ಲ. ಯೋಜನೆಗೆ ಬಿಡುಗಡೆಯಾದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಕಾಫಿ ಬೆಳೆಗಾರ ಹಾನಗಲ್ ಮಿಥುನ್ ಪ್ರಶ್ನಿಸಿದರು. ಅರಣ್ಯ ಇಲಾಖೆಯ ಇಲಾಖೆಯ ನಿರ್ಲಕ್ಷ್ಯದಿಂದ ಸಮಸ್ಯೆಯಾಗುತ್ತಿದೆ ಎಂದು ಪ್ರಮುಖರಾದ ಸುರೇಶ್‌ಶೆಟ್ಟಿ, ಬಗ್ಗನ ಹರೀಶ್, ಪ್ರಮೋದ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶೈಲೇಂದ್ರ, ಫಾರೆಸ್ಟರ್ ನಾರಾಯಣ ಮೂಲ್ಯ ಜನರನ್ನು ಸಮಾಧಾನಿಸಿದರು.