ಪುತ್ತೂರು: ವಾಹನದ ಹಳೆಯ ಟಯರ್ ಬಳಸಿಕೊಂಡು ಸಾಹಸ್ ಎಂಬ ಸಂಸ್ಥೆಯ ಕಾರ್ಯಕರ್ತರು ಸುಂದರವಾಗಿರುವ ಹುಲಿಯ ಮಾದರಿಯನ್ನು ಸೃಷ್ಟಿ ಮಾಡಿದ್ದಾರೆ. ಪುತ್ತೂರು ನಗರಸಭಾ ಕಚೇರಿ ಮುಂಭಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಈ ಹುಲಿ ಮಾದರಿಯನ್ನು ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇರಿಸಲಾಗಿದ್ದು, ಇದೀಗ ಈ ‘ಟಯರ್ ಟೈಗರ್’ ಎಲ್ಲರ ಗಮನ ಸೆಳೆಯುತ್ತಿದೆ. ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾದ ವಾಹನಕ್ಕೆ ಉಪಯೋಗಿಸಲ್ಪಟ್ಟ ಹಳೆಯ ಟೈಯರ್‌ಗಳನ್ನು ಬಳಸಿಕೊಂಡು ಪ್ರಸ್ತುತ ಪುತ್ತೂರು ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ಎಂಬ ಸ್ವಯಂ ಸೇವಾ ಸಂಸ್ಥೆಯವರು ಭಾರತದ ರಾಷ್ಟ್ರೀಯ ಪ್ರಾಣಿಯಾಗಿರುವ ಈ ಹುಲಿಯನ್ನು ತಯಾರಿಸಿದ್ದಾರೆ. ಇದರ ತಯಾರಿಕೆಗೆ ಸಂಬಂಧಿಸಿದಂತೆ ಎಚ್‌ಡಿಬಿ ಫಿನಾನ್ಶಿಯಲ್ ಸರ್ವಿಸಸ್‌ನವರು ಆರ್ಥಿಕ ನೆರವು ನೀಡಿದ್ದಾರೆ. ಉತ್ತಮ ತ್ಯಾಜ್ಯ ನಿರ್ವಹಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡು ಪ್ರಸ್ತುತ ಪುತ್ತೂರು ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ಬೆಂಗಳೂರಿನ ಸರಕಾರರೇತರ ಸಂಸ್ಥೆಯಾಗಿದೆ. ಈ ಹುಲಿಯ ಆಕಾರದ ಮಾದರಿಯನ್ನು ಗಣರಾಜ್ಯೋತ್ಸವದಂದು ಸಾಹಸ್‌ನವರು ಪುತ್ತೂರು ನಗರಸಭೆಗೆ ಹಸ್ತಾಂತರಿದ್ದಾರೆ. ನಗರಸಭಾ ಕಚೇರಿ ಮುಂಭಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಇದನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಧ್ವಜಾರೋಹಣದ ಬಳಿಕ ನಗರಸಭಾ ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಹುಲಿಯ ಮಾದರಿ ಅನಾವರಣಗೊಳಿಸಿದರು.